ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಡಾ. ಧರ್ಮಣ್ಣ ಕೆ. ಬಡಿಗೇರ್
ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯ ಬೆಳೆಸಿದರೆ ಉಜ್ವಲ ಭವಿಷ್ಯ ಸಾಧ್ಯ; ಮಹಾಲಕ್ಷ್ಮೀ ಕಂಪ್ಯೂಟರ್ಸ್‌ನಲ್ಲಿ ಪ್ರಮಾಣಪತ್ರ ವಿತರಣಾ ಸಮಾರಂಭ

ಜೇವರ್ಗಿ, ಜು.28: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮಹಾಲಕ್ಷ್ಮೀ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಧರ್ಮಣ್ಣ ಕೆ. ಬಡಿಗೇರ್ ಹೇಳಿದರು.
ಪಟ್ಟಣದ ಶ್ರೀ ಮಹಾಲಕ್ಷ್ಮೀ ಕಂಪ್ಯೂಟರ್ಸ್ ಅಕಾಡೆಮಿಯಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣದ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನವನ್ನು ಸಂಪಾದಿಸಿ ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾಲಕ್ಷ್ಮೀ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸುಧೀಂದ್ರ ವಕೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಯೂಟರ್ ತರಬೇತಿಯೊಂದಿಗೆ ತಾಂತ್ರಿಕ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂತಹ ತರಬೇತಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶೇಷ ಅತಿಥಿಯಾಗಿ ಪಾಲ್ಗೊಂಡ ಸಂಪಾದಕ ಚಂದ್ರಶೇಖರಗೌಡ ಮಾಳಿ ಪಾಟೀಲ್ ಮಾತನಾಡಿ, ಸಂಸ್ಕಾರಯುತ ಶಿಕ್ಷಣ ಮತ್ತು ನಿರಂತರ ಅಧ್ಯಯನದ ಮೂಲಕವೇ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಹೇಳಿದರು. ರಾಘವೇಂದ್ರ ಕುಲಕರ್ಣಿ ನರಿಬೋಳ್ ಹಾಗೂ ಗುರುರಾಜ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಸಂಸ್ಥೆಯ ಶಿಕ್ಷಣ ಸೇವೆಯನ್ನು ಅತಿಥಿಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಅಂಕಿತಾ ಶಾಖಾಪೂರ, ನಿಂಗಮ್ಮ ಶಾಖಾಪೂರ, ಲಕ್ಷ್ಮೀ, ಪಲ್ಲವಿ, ನಾಗರಾಜ್, ರಾಹುಲ್, ಶ್ರೀಶೈಲ, ರೇಣುಕಾ, ಭಾಗೇಶ್ ಮಡಿವಾಳಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳಾದ ರಾಜಶೇಖರ ಹಿರೇಮಠ ಹಾಗೂ ಭಾಗಣ್ಣ ಮಡಿವಾಳಕರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



