ಕಾನೂನುಜಿಲ್ಲಾಸುದ್ದಿ

ಹಿಂದಿನ ಜಿಲ್ಲಾಧಿಕಾರಿ ಫೌಜಿಯಾ ವಿರುದ್ಧ ಮಾನಹಾನಿ ಪ್ರಕರಣ: ಪರಿಷತ್ ಸದಸ್ಯ ಎನ್. ರವಿಕುಮಾರ್‌ಗೆ ಮತ್ತೆ ಬಂಧನದ ಭೀತಿ

ನ್ಯಾಯಾಲಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಜಾರಿ; ಪ್ರಕರಣದ ವಿಚಾರಣೆಗೆ ಗಂಭೀರ ತಿರುವು

ಕಲಬುರಗಿ, ಆ.25: ಹಿಂದಿನ ಜಿಲ್ಲಾಧಿಕಾರಿ ಬಿ. ಫೌಜಿಯಾ ತರುನ್ನಮ್ ಅವರಿಗೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಬಂದವರು ಎಂಬ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ವಿಚಾರಣೆಗೆ ಗೈರಾದ ಬಿಜೆಪಿ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ವಿರುದ್ಧ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

ಸಮನ್ಸ್ ಜಾರಿಯಾಗಿದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಠಿಣ ಕ್ರಮ ಕೈಗೊಂಡಿದೆ. ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದ ಗಂಭೀರತೆಯನ್ನು ಈ ಆದೇಶ ತೋರಿಸುತ್ತದೆ.

ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿ (ಎಸಿಜೆಎಂ) ನ್ಯಾಯಾಲಯದ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು ಈ ಆದೇಶ ಹೊರಡಿಸಿದ್ದಾರೆ.

ಕಳೆದ ವರ್ಷ ನಗರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ (ಫೌಜಿಯಾ ತರುನ್ನಮ್) ವಿರುದ್ಧ ಎನ್. ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರವಿಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು.

ಹೈಕೋರ್ಟ್‌ನಿಂದ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಹಾಗೂ ಅಧೀನ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ 42ನೇ ಎಸಿಜೆಎಂ ನ್ಯಾಯಾಲಯ ಇದೀಗ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

ಪ್ರಕರಣದ ಮುಂದಿನ ಬೆಳವಣಿಗೆಗಳು ಹಾಗೂ ನ್ಯಾಯಾಲಯದ ಆದೇಶದ ಅನುಷ್ಠಾನದ ಬಗ್ಗೆ ಕುತೂಹಲ ಮೂಡಿದೆ.

Related Articles

Leave a Reply

Your email address will not be published. Required fields are marked *

Back to top button