ಕಾನೂನು

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ೧೮೮ ಪ್ರಕರಣಗಳ ಇತ್ಯರ್ಥ; ₹೬.೦೪ ಕೋಟಿಗೂ ಅಧಿಕ ಪರಿಹಾರ ವಿತರಣೆ

ರಾಜಿ ಸಂಧಾನದ ಮೂಲಕ ಪ್ರಕರಣಗಳಿಗೆ ತೆರೆ; ಫಲಾನುಭವಿಗಳಿಗೆ ಪರಿಹಾರದ ಮೊತ್ತ ವಿತರಣೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕಲಬುರಗಿ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ೧೮೮ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದ್ದು, ₹೬ ಕೋಟಿ ೪ ಲಕ್ಷ ೪೭ ಸಾವಿರ ೯೨೦ ಪರಿಹಾರದ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ಈ ಕುರಿತು ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಕುಮಾರ್ ಬಿ.ಆರ್. ಪ್ರಕಟಣೆ ನೀಡಿ, ಲೋಕ ಅದಾಲತ್‌ನಲ್ಲಿ ಒಟ್ಟು ೧೮೮ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ₹೬,೦೪,೪೭,೯೨೦ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ಲೋಕ ಅದಾಲತ್‌ನ ಯಶಸ್ವಿ ನಿರ್ವಹಣೆಗಾಗಿ ಕಲಬುರಗಿ ಉಚ್ಚ ನ್ಯಾಯಾಲಯ ಪೀಠದಲ್ಲಿ ವಿಶೇಷ ಸಂಧಾನ ಪೀಠಗಳನ್ನು ರಚಿಸಲಾಗಿತ್ತು. ನ್ಯಾಯಮೂರ್ತಿಗಳಾದ ಕೆ.ಎನ್. ಕೇಶವನಾರಾಯಣ ಹಾಗೂ ಬಿ.ಎನ್. ಬಜಂತ್ರಿ ಅವರ ನೇತೃತ್ವದಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಿವಿಲ್, ಕ್ರಿಮಿನಲ್ ಸೇರಿದಂತೆ ವಿವಿಧ ಸ್ವರೂಪದ ಪ್ರಕರಣಗಳನ್ನು ಉಭಯ ಪಕ್ಷಗಳ ಸಮ್ಮತಿಯೊಂದಿಗೆ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದರಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರು ಮತ್ತು ಪಕ್ಷಕಾರರಿಗೆ ಶೀಘ್ರ ನ್ಯಾಯ ದೊರೆಯಲು ಸಹಕಾರಿಯಾಗುತ್ತದೆ ಎಂದು ಕಾರ್ಯದರ್ಶಿ ಕುಮಾರ್ ಬಿ.ಆರ್. ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button