
ಕಲಬುರಗಿ, ಅ. ೨೮: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಆಳಂದ ತಾಲ್ಲೂಕಿನ ನಿಂಬರ್ಗಾ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮಿ ಶಿವಾನಂದ ಅವರು ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ, ವಿದ್ಯಾರ್ಥಿ ಸಚಿನ್ ಯಲ್ಲಾಲಿಂಗ ಅವರು ೧೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಡಾ. ಭೀಮರಾವ್ ಅರಿಕೇರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಲ್ಲಿನಾಥ ನಾಟಿಕಾರ, ರವಿಶಂಕರ, ವಮ್ಮ ವೆಂಕಟೇಶ, ತೇಜಸ್ವಿನಿ ಹಾಗೂ ಲಕ್ಷ್ಮಣಪತರಾಜ್ ಅವರು ವಿದ್ಯಾರ್ಥಿಗಳ ಸಾಧನೆಗೆ ಶುಭಾಶಯ ಕೋರಿದ್ದಾರೆ.



