ಸರ್ಕಾರಿ ಶಿಕ್ಷಕರು ಮರು ಅರ್ಜಿ ಸಲ್ಲಿಕೆಗೆ ಅವಕಾಶ ಬೇಡ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ
ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಿಗೆ ಸಮಾನ ಹುದ್ದೆಗೆ ಮರು ಅರ್ಜಿ ಸಲ್ಲಿಸಲು ನಿರ್ಬಂಧ ವಿಧಿಸುವಂತೆ ಸರ್ಕಾರಕ್ಕೆ ಆಗ್ರಹ

ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರು ಅದೇ ಅಥವಾ ಸಮಾನ ಶಿಕ್ಷಕರ ಹುದ್ದೆಗಳಿಗೆ ಮತ್ತೆ ಅರ್ಜಿ ಸಲ್ಲಿಸುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ (ರಾಷ್ಟ್ರಕೂಟರ ನಾಡಿನ ಅಭಿವೃದ್ಧಿಗಾಗಿ ಹೋರಾಟ) ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಉದ್ಯೋಗಾಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಶೀಘ್ರದಲ್ಲೇ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಬೀಳಲಿದ್ದು, ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದೆ ಲಕ್ಷಾಂತರ ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ, ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರಿಗೆ ಅದೇ ಅಥವಾ ಸಮಾನ ಹುದ್ದೆಗಳಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಹೊಸ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕ ಸಿವಿಲ್ ಸೇವೆಗಳ ನೇಮಕಾತಿ ನಿಯಮಗಳ ಪ್ರಕಾರ ಸರ್ಕಾರಿ ನೌಕರರು ಮತ್ತೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಈ ನಿಯಮದ ದುರುಪಯೋಗದಿಂದ ಅರ್ಹ ನಿರುದ್ಯೋಗಿಗಳಿಗೆ ದೊರೆಯಬೇಕಾದ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದರು.
ಈಗಾಗಲೇ ಸರ್ಕಾರಿ ಶಿಕ್ಷಕರಾಗಿರುವವರು ಮತ್ತೊಮ್ಮೆ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಿ ಹೊಸ ಹುದ್ದೆ ಪಡೆದ ಬಳಿಕ ಹಳೆಯ ಹುದ್ದೆಯನ್ನು ಖಾಲಿ ಮಾಡುವುದರಿಂದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಆಧಾರ್, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಸೇರಿದಂತೆ ಸರ್ಕಾರಿ ದಾಖಲೆಗಳ ಮಾಹಿತಿ ಲಭ್ಯವಿರುವುದರಿಂದ, ಆನ್‌ಲೈನ್ ಅರ್ಜಿ ಹಂತದಲ್ಲಿಯೇ ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರನ್ನು ಗುರುತಿಸಿ ಮರು ಅರ್ಜಿ ಸಲ್ಲಿಕೆಯನ್ನು ತಾಂತ್ರಿಕವಾಗಿ ತಡೆಯುವುದು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.
ಹಿಂದಿನ ನೇಮಕಾತಿಗಳಲ್ಲಿ ಮರು ಆಯ್ಕೆಯಾದ ಶಿಕ್ಷಕರ ಮಾಹಿತಿಯನ್ನು ಪರಿಶೀಲಿಸಿ, ಇದೇ ರೀತಿಯ ಪರಿಸ್ಥಿತಿ ಮರುಕಳಿಸದಂತೆ ಈ ಬಾರಿಯ ಶಿಕ್ಷಕರ ನೇಮಕಾತಿ ಅಧಿಸೂಚನೆಗೂ ಮುನ್ನ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿ, ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಶಿಕ್ಷಕರಿಗೆ ಅದೇ ಅಥವಾ ಸಮಾನ ಹುದ್ದೆಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.



