ಹಾಲಿನ ದರ ಏರಿಕೆ ಖಂಡಿಸಿ ಎಸ್ಯುಸಿಐ(ಸಿ) ಪ್ರತಿಭಟನೆ
ಹಾಲಿನ ದರ ಏರಿಕೆ ಹಿಂಪಡೆಯಲು ಆಗ್ರಹ; ಪ್ರಸ್ತಾವಿತ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ವಿರೋಧ

ಕಲಬುರಗಿ, ನ. 2: ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8ರಿಂದ ₹12ರವರೆಗೆ ಹೆಚ್ಚಿಸಿರುವುದನ್ನು ಖಂಡಿಸಿ ಹಾಗೂ ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾವನೆಯನ್ನು ವಿರೋಧಿಸಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಸೋಮವಾರ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಜನರು ಬರಗಾಲದ ಸಂಕಷ್ಟ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಹಾಲಿನ ದರ ಹೆಚ್ಚಿಸಿರುವುದು ಜನವಿರೋಧಿ ನಿರ್ಧಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಸಮಸ್ಯೆ ಪರಿಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಲಿನ ದರ ಹೆಚ್ಚಿಸುವುದರಿಂದ ಉತ್ಪಾದಕರು ಮತ್ತು ಗ್ರಾಹಕರಿಬ್ಬರ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ಸದಸ್ಯೆ ಕಾ.ವಿ. ನಾಗಮ್ಮಾಳ್, ಮುಂಬರುವ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಹಾಲು ಒಕ್ಕೂಟದ ರಾಜಕೀಯ ಪದಾಧಿಕಾರಿಗಳು ಗ್ರಾಮೀಣ ಹೈನುಗಾರರಿಗೆ ಬೆಂಬಲ ನೀಡುವ ನೆಪದಲ್ಲಿ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಹಾಲು ಉತ್ಪಾದಕರು ಮತ್ತು ಗ್ರಾಹಕರಿಬ್ಬರ ಹಿತವನ್ನು ಪರಿಗಣಿಸಬೇಕು. ಮೇವು ಹಾಗೂ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಹಾಲು ಒಕ್ಕೂಟದಲ್ಲಿನ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಬದಲು ಹಾಲಿನ ದರ ಹೆಚ್ಚಿಸುವುದನ್ನೇ ಪರಿಹಾರವೆಂದು ಪರಿಗಣಿಸಿದರೆ, ಜನಸಾಮಾನ್ಯರು ಬೆಲೆ ಏರಿಕೆಯ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಹಾಲು ಮಕ್ಕಳೂ ಸೇರಿದಂತೆ ಎಲ್ಲರಿಗೂ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಹೀಗಾಗಿ, ಸರ್ಕಾರ ಕೂಡಲೇ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು ಹಾಗೂ ದೊಡ್ಡ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವುದನ್ನು ನಿಲ್ಲಿಸಿ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಬಸ್ ಪ್ರಯಾಣ ದರ ಏರಿಕೆಗೂ ವಿರೋಧ
ಮಾತನಾಡಿದ ಕಾ. ಜಗನ್ನಾಥ ಎಸ್.ಎಚ್., ನವೆಂಬರ್ 4ರಿಂದ ಬಸ್ ಪ್ರಯಾಣ ದರವನ್ನು ಶೇಕಡಾ 40ರಷ್ಟು ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂಬ ಮಾಹಿತಿ ಇದೆ. ಈಗಾಗಲೇ ಅಗತ್ಯ ವಸ್ತುಗಳು ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವುದು ಜನಸಾಮಾನ್ಯರ ಮೇಲಿನ ಮತ್ತೊಂದು ಆರ್ಥಿಕ ಹೊರೆ ಆಗಲಿದೆ ಎಂದು ಹೇಳಿದರು.
ಸರ್ಕಾರ ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರ ಹೆಚ್ಚಿಸಬಾರದು. ಈಗಾಗಲೇ ಹೆಚ್ಚಿಸಿರುವ ಹಾಲಿನ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಕಾ. ಹನುಮಂತ ಎಸ್.ಎಚ್. ಅವರೂ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಎಸ್.ಎಂ. ಶರ್ಮಾ, ಡಾ. ಸೀಮಾ, ಮಹೇಶ ಎಸ್.ಬಿ., ಸಂದೀಪ್, ಸಂತೋಷ ಹಿರವೇ, ರಾಧಾ, ತುಳಜಾರಾಮ್, ವೆಂಕಟೇಶ ದೇವದುರ್ಗ, ಪ್ರೀತಿ ದೊಡ್ಡಮನಿ, ಈಶ್ವರ, ರಮೇಶ ದೇವಕರ್, ವಿಶಾಲಾಕ್ಷಿ ಪಾಟೀಲ, ಶಿವರಾಜ್, ಸಾಬಮ್ಮ, ಭೀಮು ಆಂದೋಲಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.



