ಜಿಲ್ಲಾಸುದ್ದಿಶಿಕ್ಷಣಸಮಾಜ

ಅಂಬಿಗರ ಚೌಡಯ್ಯನವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ: ಪ್ರಿಯಾಂಕ್ ಖರ್ಗೆ

ಕೋಲಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಅಭಿವೃದ್ಧಿ ನಿಗಮ ಸ್ಥಾಪನೆ; ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಕರೆ

ಕಲಬುರಗಿ: ಮಹನೀಯರ ಜಯಂತಿ ಹಾಗೂ ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಅವರನ್ನು ಸ್ಮರಿಸುವುದಕ್ಕಿಂತ, ಅವರ ತತ್ವ, ಆದರ್ಶ ಮತ್ತು ವಿಚಾರಧಾರೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಕೋಲಿ-ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋಲಿ, ಕಬ್ಬಲಿಗ, ಬೆಸ್ತ ಸೇರಿದಂತೆ 38 ಪರ್ಯಾಯ ಹೆಸರುಗಳನ್ನು ಹೊಂದಿರುವ ಸಮುದಾಯವನ್ನು ಒಗ್ಗೂಡಿಸುವಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಕೊಡುಗೆ ಮಹತ್ವದ್ದಾಗಿದೆ. ಕೋಲಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸಮುದಾಯದ ಮುಖಂಡರು ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಲವು ಬಾರಿ ಒತ್ತಾಯಿಸಿ ಹೋರಾಟ ನಡೆಸಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಯಿತು ಎಂದರು.

ಮೀಸಲಾತಿ ಕುರಿತು ಅಧ್ಯಯನದ ವರದಿ ಪರಿಶೀಲನೆ

ಕೋಲಿ ಸೇರಿದಂತೆ ಸಂಬಂಧಿತ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸಬೇಕೆಂಬ ಬೇಡಿಕೆ ಕುರಿತು ಹೋರಾಟ ನಡೆಯುತ್ತಿದೆ. ಈ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ವರದಿಯನ್ನು ಹಿಂದಿರುಗಿಸಿದೆ. ಈ ಕುರಿತು ಅಧ್ಯಯನ ನಡೆಸಿದವರನ್ನು ಕರೆಸಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಕೋಲಿ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಿವೆ. ತಾವು ಬಸವಣ್ಣನವರು ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರಧಾರೆಗಳನ್ನು ಅನುಸರಿಸುವವರಾಗಿದ್ದು, ಮುಂದಿನ ಪೀಳಿಗೆಯೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಮಹನೀಯರ ತತ್ವಗಳಿಗೆ ಆದ್ಯತೆ ನೀಡಿ

ನಿಜಶರಣ ಅಂಬಿಗರ ಚೌಡಯ್ಯನವರ 273 ವಚನಗಳು ಮಾತ್ರ ಈವರೆಗೆ ಲಭ್ಯವಾಗಿವೆ. ಯುವಜನರು ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅಂಬಿಗರ ಚೌಡಯ್ಯನವರ ತತ್ವಗಳನ್ನು ತಿಳಿದುಕೊಂಡು ಪಾಲಿಸಬೇಕು. ಮಹನೀಯರ ಮೂರ್ತಿಗಳನ್ನು ಸ್ಥಾಪಿಸುವುದರಿಂದ ಮಾತ್ರ ಅವರ ಆಶಯಗಳು ಈಡೇರುವುದಿಲ್ಲ. ಅವರ ಆದರ್ಶಗಳು ಮತ್ತು ವಿಚಾರಗಳು ಸಮಾಜದಲ್ಲಿ ನೆಲೆಗೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್ ಮತ್ತು ಅಂಬಿಗರ ಚೌಡಯ್ಯನವರು ವ್ಯಕ್ತಿಪೂಜೆಯನ್ನು ವಿರೋಧಿಸಿದ್ದರು. ಭಕ್ತಿ ಮತ್ತು ಗೌರವ ವ್ಯಕ್ತಿಗಳ ಮೇಲಷ್ಟೇ ಕೇಂದ್ರೀಕೃತವಾಗದೆ, ಅವರು ಪ್ರತಿಪಾದಿಸಿದ ತತ್ವ ಹಾಗೂ ಆದರ್ಶಗಳ ಮೇಲಿರಬೇಕು. ಸಾರ್ವಜನಿಕ ಜೀವನದಲ್ಲಿ ಮಹನೀಯರ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದರು.

ಸಮಾಜದ ಪ್ರಗತಿಗಾಗಿ ಹಿರಿಯರು ತೋರಿದ ಮಾರ್ಗದಲ್ಲಿ ನಡೆದು, ಅವರ ಆದರ್ಶಗಳನ್ನು ಪ್ರತಿದಿನದ ಬದುಕಿನಲ್ಲಿ ಪಾಲಿಸಬೇಕು. ಅಂಬಿಗರ ಚೌಡಯ್ಯನವರ ಇತಿಹಾಸ ಮತ್ತು ಅಂಬೇಡ್ಕರ್ ಅವರ ಹೋರಾಟಗಳನ್ನು ಯುವಜನರು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು

ಮಕ್ಕಳಲ್ಲಿ ಸಹಜವಾಗಿ ಮೂಡುವ ಕುತೂಹಲವನ್ನು ಪ್ರೋತ್ಸಾಹಿಸಿ, ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಪೋಷಕರು ಮತ್ತು ಸರ್ಕಾರದ ಮೇಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.

ಯಾವುದೇ ಸಮುದಾಯವನ್ನು ಕಡೆಗಣಿಸದೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಲು ಸಂವಿಧಾನದ ಮೂಲಕ ಅಂಬೇಡ್ಕರ್ ಅವಕಾಶ ಕಲ್ಪಿಸಿದ್ದಾರೆ. ಅವರ ಹೋರಾಟ ಮತ್ತು ಸಂವಿಧಾನದ ಆಶಯಗಳನ್ನು ಯುವಜನರು ಅರಿತುಕೊಳ್ಳಬೇಕು ಎಂದರು.

ತಮಗೆ ಹಾರ-ತುರಾಯಿಗಳ ಬದಲಿಗೆ ಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿದ ಪ್ರಿಯಾಂಕ್ ಖರ್ಗೆ, ಪ್ರತಿ ತಿಂಗಳು ಸುಮಾರು ಎರಡು ಸಾವಿರ ಪುಸ್ತಕಗಳು ತಮ್ಮ ಬಳಿ ಬರುತ್ತವೆ. ಅವುಗಳನ್ನು ಅರಿವು ಕೇಂದ್ರಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.

ಕೋಲಿ ಸಮುದಾಯದ ಅಭಿವೃದ್ಧಿಗೆ ಖರ್ಗೆ ಕುಟುಂಬದ ಕೊಡುಗೆ

ಹಾವೇರಿ ಜಿಲ್ಲೆಯ ನರಸೀಪುರದ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮಾತನಾಡಿ, ಕೋಲಿ ಸಮುದಾಯದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಕೊಡುಗೆ ಅಪಾರವಾಗಿದೆ. ತುಳಿತಕ್ಕೊಳಗಾದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಖರ್ಗೆ ಕುಟುಂಬದ ಶ್ರಮ ಮಹತ್ವದ್ದಾಗಿದೆ ಎಂದು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ, ಮಾತಾ ಮಣಿಕೇಶ್ವರಿ ಹಾಗೂ ಹೋರಾಟಗಾರ ದಿವಂಗತ ವಿಠ್ಠಲ ಹೇರೂರ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ನೂತನ ಗುರುತಿನ ಚೀಟಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಮಾಲಾ ಬಿ. ನಾರಾಯಣರಾವ್, ಎಂ. ಶ್ರೀನಿವಾಸ, ಮಲ್ಲಿಕಾರ್ಜುನ ಮುಕ್ಕಾ, ಆನಂದ ರಟಕಲ್, ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ್, ಸಿದ್ದು ಬಾನರ್, ನಾಮದೇವ ಕಡಕೋಳ, ಧರ್ಮರಾಜ ಜವಳಿ, ಅನಿಲ್ ಜಮಾದಾರ್, ಸಿದ್ದಣ್ಣ ಮುಕರಂಬಿ, ರಾಜೇಂದ್ರ ಝಳಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button