ಆರೋಗ್ಯ

ನೇತ್ರದಾನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯ: ಡಾ. ಗುರುಪ್ರಸಾದ

ನೇತ್ರದಾನದಿಂದ ಮತ್ತೊಬ್ಬರ ಬದುಕಿಗೆ ಬೆಳಕು; ಕೆಬಿಎನ್ ನೇತ್ರ ಬ್ಯಾಂಕ್ 24 ಗಂಟೆಯೂ ಸಕ್ರಿಯ

ಕಲಬುರಗಿ: ನೇತ್ರದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ಒಬ್ಬರು ಮಾಡುವ ನೇತ್ರದಾನ ಮತ್ತೊಬ್ಬರ ಬದುಕಿಗೆ ಬೆಳಕು ನೀಡುವ ಮಹತ್ವದ ಕಾರ್ಯವಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಮೆಡಿಕಲ್ ಡೀನ್ ಡಾ. ಗುರುಪ್ರಸಾದ ಹೇಳಿದರು.

ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕೆಬಿಎನ್ ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ವೈದ್ಯಕೀಯ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ನೇತ್ರದಾನಕ್ಕೆ ಸಂಬಂಧಿಸಿದಂತೆ ಕೆಬಿಎನ್ ನೇತ್ರ ಬ್ಯಾಂಕ್ ಅನ್ನು ಯಾವುದೇ ಸಮಯದಲ್ಲೂ ಸಂಪರ್ಕಿಸಬಹುದು ಎಂದು ತಿಳಿಸಿದರು.

ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ, ನೇತ್ರದಾನ ಅತ್ಯಂತ ಅವಶ್ಯಕವಾಗಿದ್ದು, ಅದು ಮತ್ತೊಬ್ಬರ ಜೀವನದಲ್ಲಿ ಬೆಳಕು ಮೂಡಿಸುತ್ತದೆ. ಹೀಗಾಗಿ ನೇತ್ರದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಣ್ಣಿನ ವಿಭಾಗದ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.

ಡಾ. ಪಿ.ಎಸ್. ಶಂಕರ ಮಾತನಾಡಿ, ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ. ಕೆಬಿಎನ್ ನೇತ್ರ ಬ್ಯಾಂಕ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸದಾ ಸಕ್ರಿಯವಾಗಿದೆ. ತುರ್ತು ಪರಿಸ್ಥಿತಿ ಯಾವುದೇ ಸಮಯದಲ್ಲೂ ಎದುರಾಗಬಹುದಾದ್ದರಿಂದ ನೇತ್ರದಾನಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಸದಾ ಸನ್ನದ್ಧವಾಗಿರುತ್ತದೆ ಎಂದರು.

ಕಣ್ಣಿನ ವಿಭಾಗದ ಮುಖ್ಯಸ್ಥೆ ಡಾ. ಸಂಗೀತಾ ಮಾತನಾಡಿ, ನೇತ್ರದಾನದ ಕುರಿತು ಇರುವ ತಪ್ಪು ಕಲ್ಪನೆಗಳು ಹಾಗೂ ಅಂಧಶ್ರದ್ಧೆಗಳನ್ನು ಬದಿಗೊತ್ತಬೇಕು. ವ್ಯಕ್ತಿಯ ಮರಣದ ನಂತರ 8 ಗಂಟೆಗಳೊಳಗೆ ನೇತ್ರದಾನ ಮಾಡಬಹುದಾಗಿದ್ದು, ಈ ಕುರಿತು ಸ್ನೇಹಿತರು ಹಾಗೂ ಸಂಬಂಧಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಡಾ. ಶ್ರೀಜಾ ಅವರು ನೇತ್ರದಾನದ ಮಹತ್ವವನ್ನು ವಿವರಿಸಿ, ಸಾರ್ವಜನಿಕರು ನೇತ್ರದಾನಕ್ಕೆ ಮುಂದಾಗುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರಬಂಧ ಹಾಗೂ ಪೋಸ್ಟರ್ ಪ್ರಸ್ತುತಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನೇತ್ರದಾನದ ಮಹತ್ವವನ್ನು ಸಾರುವ ಉದ್ದೇಶದಿಂದ ವಿದ್ಯಾರ್ಥಿಗಳು ಸ್ಕಿಟ್ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಧಿಕಾ, ಕಣ್ಣಿನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸನಾ ಹುಸ್ಸೇನಿ, ಡಾ. ಪ್ರಾಣೇಶ್ ಕುಲಕರ್ಣಿ, ಡಾ. ಅಭಿಷೇಕ ಕುಲಕರ್ಣಿ, ಡಾ. ಶಿಲ್ಪಾ, ಡಾ. ವಜಿಹಾ, ಡಾ. ಅಫ್ರೀನ, ಡಾ. ಝೆಬಾ ಹಾಗೂ ಡಾ. ಅಮೋಘ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ದೃಷ್ಟಿ ಮರಳಿ ಪಡೆದ ಜಾವೆದ್ ಮಿಯಾನ ಪ್ಯಾರೆ

“ದೃಷ್ಟಿಹೀನನಾಗಿದ್ದ ನನಗೆ ಕೆಬಿಎನ್ ಆಸ್ಪತ್ರೆಯಲ್ಲಿ ಕಾರ್ನಿಯಾ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಇದೀಗ ದೃಷ್ಟಿ ಮರಳಿ ಪಡೆದು ಜಗತ್ತನ್ನು ನೋಡಲು ಸಾಧ್ಯವಾಗಿದೆ. ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತಿತ್ತು. ನನ್ನ ಪರಿಸ್ಥಿತಿಯನ್ನು ಅರಿತು ಕಡಿಮೆ ವೆಚ್ಚದಲ್ಲಿ ಕಠಿಣ ಶಸ್ತ್ರಚಿಕಿತ್ಸೆ ನಡೆಸಿ ನನಗೆ ದೃಷ್ಟಿ ನೀಡಿದ ಡಾ. ಅಭಿಷೇಕ ಕುಲಕರ್ಣಿ ಹಾಗೂ ಕೆಬಿಎನ್ ಆಸ್ಪತ್ರೆಗೆ ಧನ್ಯವಾದಗಳು” ಎಂದು ಚಿಕಿತ್ಸೆ ಪಡೆದ ಜಾವೆದ್ ಮಿಯಾನ ಪ್ಯಾರೆ ತಮ್ಮ ಅನುಭವ ಹಂಚಿಕೊಂಡರು.

ನೇತ್ರದಾನಕ್ಕೆ ಸಂಪರ್ಕಿಸಿ

ನೇತ್ರದಾನ ಮಾಡಲು ಆಸಕ್ತರು ಡಾ. ಅಭಿಷೇಕ ಕುಲಕರ್ಣಿ – 8050155550 ಅಥವಾ ಕೆಬಿಎನ್ ಆಸ್ಪತ್ರೆ – 08472-223458, 224027 ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button