ಜಿಲ್ಲಾಸುದ್ದಿ

ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ₹18 ಕೋಟಿ ಮಧ್ಯಂತರ ಪರಿಹಾರ ಶೀಘ್ರ

ಹೆಸರು, ಉದ್ದು, ಸೋಯಾಬೀನ್ ಬೆಳೆಗಾರರಿಗೆ ನೆರವು; 37,051 ರೈತರಿಗೆ ಪ್ರಯೋಜನ – ಪ್ರಿಯಾಂಕ್ ಖರ್ಗೆ

ಕಲಬುರಗಿ, ಸೆ.1: ಖಾರಿಫ್ ಋತುವಿನಲ್ಲಿ ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪ್ರಸಕ್ತ 2026-27ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಿಗೆ ₹18 ಕೋಟಿ ಮಧ್ಯಂತರ ಪರಿಹಾರ ಮಂಜೂರು ಮಾಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಪರಿಹಾರ ಮಂಜೂರಾಗಲಿದೆ ಎಂದು ರಾಜ್ಯದ ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮಂಗಳವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಿಡ್ ಸೀಸನ್ ಅಡ್ವರ್ಸಿಟಿ’ ಅಡಿಯಲ್ಲಿ ನೀಡಲಾಗುವ ಈ ಮಧ್ಯಂತರ ಪರಿಹಾರದಿಂದ ಜಿಲ್ಲೆಯ ಸುಮಾರು 37,051 ರೈತರಿಗೆ ನೆರವಾಗಲಿದೆ ಎಂದರು.

ಕಳೆದ ವರ್ಷವೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರಂತರ ಪ್ರಯತ್ನದಿಂದ ಕಲಬುರಗಿ ಜಿಲ್ಲೆಯ ರೈತರಿಗೆ ದಾಖಲೆ ಪ್ರಮಾಣದಲ್ಲಿ ಬೆಳೆ ಪರಿಹಾರ ದೊರಕುವಂತೆ ಮಾಡಲಾಗಿತ್ತು. ಈ ಬಾರಿಯೂ ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕಲಬುರಗಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಳೆ ಕೊರತೆ

ಜೂನ್ ಮತ್ತು ಜುಲೈ ತಿಂಗಳಲ್ಲಿ ಸತತ ಮೂರು ವಾರಗಳ ಕಾಲ ಮಳೆಯಾಗದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ನಿಯಮಾವಳಿಯನ್ವಯ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಈ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಯಾವುದೇ ತಾಲೂಕು ಸೇರದಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.

ಆಗಸ್ಟ್ ತಿಂಗಳಲ್ಲಿ ಅಫಜಲಪುರದಲ್ಲಿ ಶೇ.65, ಆಳಂದದಲ್ಲಿ ಶೇ.66, ಚಿಂಚೋಳಿಯಲ್ಲಿ ಶೇ.61, ಕಲಬುರಗಿಯಲ್ಲಿ ಶೇ.68, ಜೇವರ್ಗಿಯಲ್ಲಿ ಶೇ.74, ಕಮಲಾಪುರದಲ್ಲಿ ಶೇ.57, ಯಡ್ರಾಮಿಯಲ್ಲಿ ಶೇ.69 ಹಾಗೂ ಶಹಾಬಾದದಲ್ಲಿ ಶೇ.62ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಎನ್‌ಡಿಆರ್‌ಎಫ್‌ ನಿಯಮಾವಳಿಯನ್ವಯ ಮಾಸಿಕ ಶೇ.55ರಿಂದ 60ರಷ್ಟು ಮಳೆ ಕೊರತೆ ಕಂಡುಬರುವ ಪ್ರದೇಶಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಎನ್‌ಡಿಆರ್‌ಎಫ್ ನಿಯಮಾವಳಿ ಬದಲಾವಣೆಗೆ ಒತ್ತಾಯ

ಬರ ಘೋಷಣೆಗೆ ಸಂಬಂಧಿಸಿದ ಎನ್‌ಡಿಆರ್‌ಎಫ್‌ ನಿಯಮಾವಳಿಯನ್ನು 2020ರಲ್ಲಿ ಎನ್‌ಡಿಎ ಸರ್ಕಾರ ಪರಿಷ್ಕರಿಸಿದ್ದು, ಇದರಿಂದ ವಾಸ್ತವವಾಗಿ ಬರಗಾಲದ ಪರಿಸ್ಥಿತಿ ಇದ್ದರೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಚಿವರು ಆರೋಪಿಸಿದರು.

ಬರ ಘೋಷಣೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಇರಬೇಕು. ಹಿಂದಿನ ಯುಪಿಎ ಅವಧಿಯಲ್ಲಿ ಜಾರಿಯಲ್ಲಿದ್ದ ಎನ್‌ಡಿಆರ್‌ಎಫ್‌ ನಿಯಮಾವಳಿಯನ್ನು ಮರುಜಾರಿಗೆ ತರಬೇಕು ಎಂಬುದು ರಾಜ್ಯ ಸರ್ಕಾರದ ಬೇಡಿಕೆಯಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗೆ ಕ್ರಮ

ರಾಜ್ಯದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಪುನರ್‌ರಚನೆಗೆ ಸಮಿತಿ ರಚಿಸಲಾಗಿದೆ. ಸಮಿತಿಯ ಶಿಫಾರಸುಗಳು ಮುಂದಿನ ಒಂದು ತಿಂಗಳಲ್ಲಿ ಸಚಿವ ಸಂಪುಟದ ಮುಂದೆ ಬರಲಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಇತ್ತೀಚೆಗೆ ರಾಜ್ಯದ ಅತ್ಯುತ್ತಮ ಪೊಲೀಸ್ ಪೇದೆ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳೊಂದಿಗೆ ಸಂವಾದ ನಡೆಸಿದ್ದು, ಇಲಾಖೆಯಲ್ಲಿನ ಅಗತ್ಯ ಸುಧಾರಣೆಗಳ ಕುರಿತು ಚರ್ಚಿಸಲಾಗಿದೆ. ಸಿ&ಆರ್‌ ನಿಯಮಗಳಲ್ಲಿಯೂ ತಿದ್ದುಪಡಿ ತರಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕುವುದು, ಜೂಜಾಟ ನಿಯಂತ್ರಿಸುವುದು ಹಾಗೂ ಯುವಜನರನ್ನು ದುಶ್ಚಟಗಳಿಂದ ದೂರವಿಡುವ ಉದ್ದೇಶದಿಂದ ‘ನಶಾ ಮುಕ್ತ ಅಭಿಯಾನ’ ಮತ್ತು ‘ಬೇಡ ಬ್ರೋ’ ಅಭಿಯಾನಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button