ವೃದ್ಧಾಶ್ರಮ, ಖಾಜಾ ಬಜಾರ್ನಲ್ಲಿ ಆರೋಗ್ಯ ತಪಾಸಣೆ

ಕಲಬುರಗಿ, ಅ.2- ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಗುರುವಾರ ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ವೈದ್ಯಕೀಯ ನಿಕಾಯದ ಸಮುದಾಯ ವೈದ್ಯಕೀಯ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗದ ವತಿಯಿಂದ ಮಹಾದೇವಿ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ ಹಿರಿಯ ನಾಗರಿಕರಿಗೆ ಹಣ್ಣುಗಳನ್ನು ವಿತರಿಸಿ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ಇಂಟರ್ನ್ ವೈದ್ಯ ಡಾ. ಸಂಗಮೇಶ್ ಅವರು ಹಿರಿಯ ನಾಗರಿಕರಿಗೆ ಸಾಮಾನ್ಯ ಆರೋಗ್ಯದ ಕುರಿತು ಜಾಗೃತಿ ಉಪನ್ಯಾಸ ನೀಡಿದರು. ಶಿಬಿರದಲ್ಲಿ ಸುಮಾರು 39 ವೃದ್ಧರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಇದೇ ವೇಳೆ ಖಾಜಾ ಬಜಾರ್ ಆರೋಗ್ಯ ಕೇಂದ್ರದಲ್ಲಿಯೂ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಖಾಜಾ ಬಜಾರ್, ದರ್ಗಾ ಪ್ರದೇಶ, ಗ್ಯಾರೇಜ್ ಸೀಡಿ ಹಾಗೂ ಆಟೋ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದ ಹಿರಿಯ ನಾಗರಿಕರ ಬಳಿಗೆ ತೆರಳಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಮಾಡಲಾಯಿತು.
ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿರಿಯ ನಾಗರಿಕರನ್ನು ಮುಂದಿನ ಚಿಕಿತ್ಸೆಗೆ ಕೆಬಿಎನ್ ಆಸ್ಪತ್ರೆಗೆ ಕರೆತರಲು ವ್ಯವಸ್ಥೆ ಮಾಡಲಾಯಿತು.
ಶಿಬಿರದ ಮೂಲಕ ಸುಮಾರು 100 ಹಿರಿಯ ನಾಗರಿಕರಿಗೆ ವೈದ್ಯಕೀಯ ಸೇವೆ ದೊರೆಯಿತು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಶೇಹನಾಜ್ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ವಹೀದ್ ಸೇರಿದಂತೆ ಸುಮಾರು 15 ವೈದ್ಯರ ತಂಡವು ಕಾರ್ಯಕ್ರಮದಲ್ಲಿ ಭಾಗವಹಿಸಿತು.



