ಸಂಘಟನೆಗೆ ಬದ್ಧತೆ ಮುಖ್ಯ: ಡಾ. ಅಶೋಕ್ ದೊಡ್ಡಮನಿ
ಸಾಮಾಜಿಕ ಅನ್ಯಾಯ, ಶೋಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಸಂಘಟಿತ ಹೋರಾಟ ಅಗತ್ಯ

ಕಲಬುರಗಿ, ಆ.25- ಸಂಘಟನೆ ಬಲಿಷ್ಠವಾಗಬೇಕಾದರೆ ತತ್ವ, ಸಿದ್ಧಾಂತ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡಿದಾಗ ಮಾತ್ರ ಸಂಘಟನೆ ಯಶಸ್ವಿಯಾಗಲು ಸಾಧ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಅಶೋಕ್ ದೊಡ್ಡಮನಿ ಸಲಹೆ ನೀಡಿದರು.
ನಗರದ ಐವಾನ್-ಎ-ಶಾಹಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷ ದಿಲೀಪಕುಮಾರ್ ವರ್ಮಾ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರ ನೇಮಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬೇರೂರಿರುವ ಜಾತೀಯತೆ, ಶೋಷಣೆ ಹಾಗೂ ಅಂಧಕಾರವನ್ನು ಹೋಗಲಾಡಿಸುವ ಜೊತೆಗೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಂಘಟಿತ ಹೋರಾಟದ ಅಗತ್ಯವಿದೆ. ಮಹಿಳೆಯರು ಹಾಗೂ ದೌರ್ಜನ್ಯಕ್ಕೆ ಒಳಗಾದ ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘಟನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಡಾ. ಅಶೋಕ್ ದೊಡ್ಡಮನಿ ಹೇಳಿದರು.
ಈ ಸಂದರ್ಭದಲ್ಲಿ ಗೌರಿಶಂಕರ್ ವಿರಾನ್ ಅವರು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡರು.
ನಂತರ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ದಿಲೀಪಕುಮಾರ್ ವರ್ಮಾ ಮಾತನಾಡಿ, ಬಡವರು, ದೀನದಲಿತರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿಕರಿಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕು. ಶೋಷಿತ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕೇಶ್ ದಿಲೀಪಕುಮಾರ್ ವರ್ಮಾ, ಐನೊಳ್ಳಿ, ರಾಜು ರಟಕಲ್, ಅಶೋಕ್ ವಾಡೇಕರ್, ರಾಹುಲ್ ರೆಡ್ಡಿ, ರಾಹುಲ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



