
ಕಲಬುರಗಿ, ಆ.22: ಡಾ. ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹದ ಪರಿಕಲ್ಪನೆ ಕೇವಲ ಅನ್ನ ನೀಡುವುದಕ್ಕೆ ಸೀಮಿತವಾಗಿರದೆ, ಜ್ಞಾನ, ಶಿಕ್ಷಣ ಹಾಗೂ ಸಂಸ್ಕೃತಿಯ ಬೆಳವಣಿಗೆಯ ಮೂಲಕ ಅದರ ಪರಿಧಿಯನ್ನು ವಿಸ್ತರಿಸಿದ ಮಹನೀಯರು ಎಂದು ಶರಣಬಸವ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್. ಪಾಟೀಲ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ, ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ‘ಡಾ. ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಪರಿಕಲ್ಪನೆ’ ವಿಷಯ ಕುರಿತು ಅವರು ಮಾತನಾಡಿದರು.
ಮಹಾದಾಸೋಹದ ಮೊದಲ ಹಾಗೂ ಪ್ರಮುಖ ಆಯಾಮ ಅನ್ನದಾಸೋಹ. ಹಸಿದವರಿಗೆ ಅನ್ನ ನೀಡುವುದು, ಭಕ್ತರಿಗೆ ಹಾಗೂ ಸಮಾಜದ ವಿವಿಧ ವರ್ಗಗಳ ಜನರಿಗೆ ಆಹಾರ ಒದಗಿಸುವ ಮೂಲಕ ಡಾ. ಅಪ್ಪ ಅವರು ಅನ್ನದಾಸೋಹದ ಪರಂಪರೆಯನ್ನು ಮುಂದುವರಿಸಿದರು ಎಂದು ತಿಳಿಸಿದರು.
ಡಾ. ಅಪ್ಪ ಅವರ ಮಹಾದಾಸೋಹ ಪರಿಕಲ್ಪನೆಯ ಮತ್ತೊಂದು ಪ್ರಮುಖ ಆಯಾಮ ಜ್ಞಾನದಾಸೋಹವಾಗಿದೆ. ಅವರ ದೃಷ್ಟಿಯಲ್ಲಿ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ರೂಪಿಸಿ ಸಮಾಜ ಸೇವೆಗೆ ಸಿದ್ಧಗೊಳಿಸುವ ಮಾಧ್ಯಮವಾಗಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನವನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವ ಪ್ರಯತ್ನಕ್ಕೆ ಅವರು ಮಹತ್ವ ನೀಡಿದರು ಎಂದರು.
ಅಪ್ಪ ಅವರ ಮಹಾದಾಸೋಹದ ವಿಶೇಷತೆಯೆಂದರೆ ಶಿಕ್ಷಣವನ್ನೂ ದಾಸೋಹದ ಒಂದು ರೂಪವಾಗಿ ಪರಿಗಣಿಸಿರುವುದು. ಕಲಿಯುವುದು ಮತ್ತು ಕಲಿಸುವುದು ಕೇವಲ ಜೀವನೋಪಾಯಕ್ಕಾಗಿ ಇರಬಾರದು; ಅದು ಇತರರ ಕಲ್ಯಾಣಕ್ಕೂ ಸಹಕಾರಿಯಾಗಬೇಕು ಎಂಬುದು ಅವರ ಶಿಕ್ಷಣ ತತ್ವವಾಗಿತ್ತು. ಈ ಕಾರಣದಿಂದ ಅವರ ನೇತೃತ್ವದ ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ಸಮಾಜಕ್ಕೆ ಅರ್ಪಿಸುವ ಕೇಂದ್ರಗಳಾಗಿ ಬೆಳೆದವು ಎಂದು ಡಾ. ಪಾಟೀಲ ಹೇಳಿದರು.
ಡಾ. ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಪರಿಕಲ್ಪನೆಯ ಮೂಲ ಆಶಯ ‘ನಾವು ಗಳಿಸಿದ್ದನ್ನು ಸಮಾಜಕ್ಕೆ ಮರಳಿ ನೀಡಬೇಕು’ ಎಂಬುದಾಗಿದೆ. ಅನ್ನ ನೀಡುವುದರಿಂದ ಆರಂಭವಾಗುವ ದಾಸೋಹವು ಜ್ಞಾನ ನೀಡುವ ಹಂತಕ್ಕೆ ತಲುಪಿ, ಅಲ್ಲಿಂದ ಶಿಕ್ಷಣ, ಸಂಸ್ಕೃತಿ, ಮಾನವೀಯತೆ ಹಾಗೂ ಸಾಮಾಜಿಕ ಅಭಿವೃದ್ಧಿಯಾಗಿ ವಿಸ್ತರಿಸುತ್ತದೆ. ಹೀಗಾಗಿ ಅವರ ಮಹಾದಾಸೋಹವನ್ನು ‘ಅನ್ನದಾಸೋಹದಿಂದ ಜ್ಞಾನದಾಸೋಹದವರೆಗೆ, ವೈಯಕ್ತಿಕ ಸೇವೆಯಿಂದ ಸಾಮಾಜಿಕ ಪರಿವರ್ತನೆಯವರೆಗೆ ಸಾಗಿದ ಸಮಗ್ರ ಸೇವಾ ತತ್ವ’ ಎಂದು ಕರೆಯಬಹುದು ಎಂದು ಅವರು ವಿವರಿಸಿದರು.
ಈ ಮಹಾದಾಸೋಹ ಪರಿಕಲ್ಪನೆಯು ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಡಾ. ಅಪ್ಪ ಅವರ ಕೊಡುಗೆಯ ಪ್ರಮುಖ ಅಂಶವಾಗಿದೆ ಎಂದು ಡಾ. ಪಾಟೀಲ ಹೇಳಿದರು.



