ಶರಣಬಸವಪ್ಪ ಅಪ್ಪ ಅವರ ಅರಿವಿನ ದಾಸೋಹ ವಿಶಾಲವಾದ ಜೀವನದರ್ಶನ: ಡಾ. ಮದಾನಿ
ಅರಿವಿನ ದಾಸೋಹವು ಜ್ಞಾನ ಹಂಚಿಕೆಗೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಗೆ ದಾರಿಯಾಗಬೇಕು

ಕಲಬುರಗಿ, ಆ.25- ಡಾ. ಶರಣಬಸವಪ್ಪ ಅಪ್ಪ ಅವರ ಅರಿವಿನ ದಾಸೋಹ ಎನ್ನುವುದು ಜ್ಞಾನವನ್ನು ಹಂಚುವ ಸರಳ ಕಾರ್ಯಕ್ಕಿಂತಲೂ ವಿಶಾಲವಾದ ಜೀವನದರ್ಶನವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶೈಲ ಮದಾನಿ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಹಾಗೂ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ‘ಡಾ. ಶರಣಬಸವಪ್ಪ ಅಪ್ಪ ಅವರ ಅರಿವಿನ ದಾಸೋಹ’ ವಿಷಯ ಕುರಿತು ಅವರು ಮಾತನಾಡಿದರು.
ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹದ ಪರಿಕಲ್ಪನೆಯಲ್ಲಿ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ, ಶಿಕ್ಷಣದಾಸೋಹ ಹಾಗೂ ಅರಿವಿನ ದಾಸೋಹಕ್ಕೂ ಅತ್ಯಂತ ಮಹತ್ವವಿದೆ. ಅರಿವು ಎಂದರೆ ಜ್ಞಾನ, ವಿವೇಕ, ವಿಚಾರಶಕ್ತಿ ಹಾಗೂ ಜೀವನದ ಸತ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ದಾಸೋಹ ಎಂದರೆ ತನ್ನಲ್ಲಿರುವ ಸಂಪತ್ತು, ಜ್ಞಾನ, ಶಕ್ತಿ ಮತ್ತು ಸೇವೆಯನ್ನು ಸಮಾಜದ ಒಳಿತಿಗಾಗಿ ಮುಕ್ತವಾಗಿ ಹಂಚಿಕೊಳ್ಳುವುದು ಎಂದು ಅವರು ವಿವರಿಸಿದರು.
ತಾನು ಪಡೆದ ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳದೆ, ಅದನ್ನು ಇತರರೊಂದಿಗೆ ಹಂಚಿಕೊಂಡು ಅವರ ಬದುಕನ್ನು ಉತ್ತಮಗೊಳಿಸುವುದೇ ಅರಿವಿನ ದಾಸೋಹದ ಮೂಲ ಆಶಯವಾಗಿದೆ. ಹೀಗಾಗಿ ಅರಿವಿನ ದಾಸೋಹ ಕೇವಲ ಪುಸ್ತಕದ ಜ್ಞಾನ ನೀಡುವುದಕ್ಕೆ ಸೀಮಿತವಾಗದೆ, ನೈತಿಕತೆ, ಮಾನವೀಯತೆ, ಶಿಸ್ತು, ಪ್ರಾಮಾಣಿಕತೆ, ಸಹಾನುಭೂತಿ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬೆಳೆಸುವ ಕಾರ್ಯವೂ ಆಗಿದೆ ಎಂದು ಡಾ. ಮದಾನಿ ಹೇಳಿದರು.
ಅರಿವಿನ ದಾಸೋಹವು ಪರಂಪರೆಯ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಆಧುನಿಕ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಹೊಸ ಶಿಕ್ಷಣ ಕ್ಷೇತ್ರಗಳಿಗೂ ಉತ್ತೇಜನ ನೀಡಬೇಕು. ಶರಣಬಸವ ವಿಶ್ವವಿದ್ಯಾಲಯದ ಶೈಕ್ಷಣಿಕ ದೃಷ್ಟಿಕೋನದಲ್ಲಿ ಸಂಶೋಧನೆ, ನವೀನತೆ, ವಿಮರ್ಶಾತ್ಮಕ ಚಿಂತನೆ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅಪ್ಪಾಜಿಯವರ ಅರಿವಿನ ದಾಸೋಹದ ಅಂತಿಮ ಗುರಿ ವ್ಯಕ್ತಿಯೊಬ್ಬರ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ, ಸಮಾಜದ ಪರಿವರ್ತನೆಯಾಗಿದೆ. ಶಿಕ್ಷಣ ಪಡೆದ ಪ್ರತಿಯೊಬ್ಬರೂ ತಮ್ಮ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂಬ ಆಶಯ ಇದರಲ್ಲಿದೆ. ಮಹಿಳಾ ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹವೂ ಅರಿವಿನ ದಾಸೋಹದ ಪ್ರಮುಖ ಭಾಗವಾಗಿದೆ. ಅಪ್ಪಾಜಿಯವರ ಅರಿವಿನ ದಾಸೋಹ ಮುಂದಿನ ಪೀಳಿಗೆಗಳಿಗೂ ದಾರಿದೀಪವಾಗಿರುವ ಶಾಶ್ವತ ಪರಂಪರೆಯಾಗಿದೆ ಎಂದು ಡಾ. ಶ್ರೀಶೈಲ ಮದಾನಿ ಹೇಳಿದರು.



