ಧಾರ್ಮಿಕ

ವೀರಶೈವ ದೀಕ್ಷೆಯು ಎಲ್ಲರ ಮೋಕ್ಷಕ್ಕೆ ಮಹಾದ್ವಾರ: ಶ್ರೀಶೈಲ ಜಗದ್ಗುರುಗಳು

ಜಾತಿ-ಭೇದವಿಲ್ಲದೆ ಎಲ್ಲರೂ ಲಿಂಗದೀಕ್ಷೆ ಪಡೆಯಲು ಅವಕಾಶವಿದೆ; ದೀಕ್ಷೆಯ ನಿಯಮಗಳನ್ನು ಪಾಲಿಸುವುದು ಅಗತ್ಯ

ಶ್ರೀಶೈಲಂ (ಆಂಧ್ರಪ್ರದೇಶ), ಆ.21- ವೀರಶೈವ ಲಿಂಗಾಯತ ಧರ್ಮದಲ್ಲಿ ಶ್ರೀಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಯಾವುದೇ ಜಾತಿ-ಭೇದವಿಲ್ಲದೆ ಎಲ್ಲರೂ ಪಡೆದುಕೊಳ್ಳಲು ಮುಕ್ತ ಅವಕಾಶವಿದೆ. ಹೀಗಾಗಿ ಲಿಂಗದೀಕ್ಷೆಯು ಎಲ್ಲರ ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಶ್ರೀಶೈಲದ ಶ್ರೀ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ನಡೆದ ಸಾಮೂಹಿಕ ಅಯ್ಯಾಚಾರ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರೀಗುರುವು ಇಷ್ಟಲಿಂಗ ದೀಕ್ಷೆ ಹಾಗೂ ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇದಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ವಿಧದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ದೂರಗೊಳಿಸುತ್ತಾನೆ. ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ತಪ್ಪದೆ ಪೂಜಿಸಬೇಕು ಎಂದು ಅವರು ಹೇಳಿದರು.

ಸದಾಚಾರ ಹಾಗೂ ಸದ್ವಿಚಾರ ಸಂಪನ್ನರಾಗಿ ನಿಷ್ಠೆಯಿಂದ ಲಿಂಗಪೂಜೆಯ ಮಹಾವ್ರತವನ್ನು ಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡೆಯಬಹುದು. ಯಾವುದೇ ಜಾತಿ, ವರ್ಗ ಅಥವಾ ವರ್ಣಕ್ಕೆ ಸೇರಿದವರಾಗಿದ್ದರೂ ಶಿವನಲ್ಲಿ ಹಾಗೂ ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆಯುಳ್ಳವರಾಗಿ, ದೀಕ್ಷೆಯ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದರೆ ಗುರುಗಳಿಂದ ದೀಕ್ಷೆ ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಜಗದ್ಗುರುಗಳು ತಿಳಿಸಿದರು.

ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಧರ್ಮ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನೈತಿಕ ಮಾರ್ಗದರ್ಶನವನ್ನು ನೀಡುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ಬಸವಾದಿ ಶಿವಶರಣರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಸನಾತನ ಆಚಾರ್ಯ ಪರಂಪರೆ ಹಾಗೂ ಶರಣ ಪರಂಪರೆಯನ್ನು ಸಮಾನ ಗೌರವದಿಂದ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಜೈನಾಪುರದ ರೇಣುಕ ಶಿವಾಚಾರ್ಯ ಸ್ವಾಮೀಜಿಗಳು ದೀಕ್ಷಾರ್ಥಿಗಳು ಹಾಗೂ ವಟುಗಳಿಗೆ ಲಿಂಗದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡಿದರು. 100ಕ್ಕೂ ಅಧಿಕ ಜಂಗಮ ವಟುಗಳು ಅಯ್ಯಾಚಾರವನ್ನು ಹಾಗೂ ಅನೇಕ ಭಕ್ತರು ಲಿಂಗದೀಕ್ಷೆಯನ್ನು ಪಡೆದುಕೊಂಡರು.

ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತಾಧಿಕಾರಿ ಎಂ. ಶ್ರೀನಿವಾಸ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಶೈಲ ಪೀಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.

ಮಲ್ಲಿಕಾರ್ಜುನ ಶಾಸ್ತ್ರಿಗಳು ಹಾಗೂ ಶಿವಶಂಕರ ಸ್ವಾಮೀಜಿಯವರು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಧರ್ಮೋಪದೇಶ ನೀಡಿದರು. ಶ್ರೀಪೀಠದ ಮುಖ್ಯ ವ್ಯವಸ್ಥಾಪಕ ಎಂ.ಬಿ. ಮಂಜುನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀಶೈಲಂ ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ಅವರು ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button