ಸಾಹಿತ್ಯ

ವಿಭಾಗ ಮಟ್ಟದ ಪ್ರಥಮ ವಚನ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರಾಗಿ ನೆಲೋಗಿ ಶ್ರೀಗಳ ಆಯ್ಕೆ

ಆ.30ರಂದು ಕನ್ನಡ ಭವನದಲ್ಲಿ ಒಂದು ದಿನದ ವಿಭಾಗ ಮಟ್ಟದ ವಚನ ಸಾಹಿತ್ಯ ಸಮ್ಮೇಳನ

ಕಲಬುರಗಿ, ಆ.21- ನಗರದ ಕನ್ನಡ ಭವನದ ಆವರಣದಲ್ಲಿ ಆಗಸ್ಟ್ 30ರಂದು ಆಯೋಜಿಸಲಾಗಿರುವ ಒಂದು ದಿನದ ವಿಭಾಗ ಮಟ್ಟದ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ವಚನ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ರೂಪಿಸಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಬಸವತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ತತ್ವಪ್ರಸಾರದಲ್ಲಿ ಶ್ರಮಿಸುತ್ತಿರುವ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಜೇವರ್ಗಿ ತಾಲೂಕಿನ ಸೋನ್ನ ಗ್ರಾಮ ಮೂಲದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆಲೋಗಿಯಲ್ಲಿ ಪೂರ್ಣಗೊಳಿಸಿದ ಅವರು, ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಸಂಸ್ಕೃತ ಹಾಗೂ ಯೋಗ ಶಿಕ್ಷಣ ಪಡೆದು, ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಶ್ರೀಗಳು 150ಕ್ಕೂ ಅಧಿಕ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ದಾಸೋಹ ಪರಂಪರೆಯನ್ನು ಮುಂದುವರಿಸಿದ್ದಾರೆ. ಶಿಕ್ಷಣ ಸೇವೆಯ ಜೊತೆಗೆ ಬಸವಾದಿ ಶರಣರ ವಚನಗಳು ಹಾಗೂ ತತ್ವಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ನೂರಾರು ಪ್ರವಚನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಚನ ಜಾಗೃತಿ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಪ್ರಭಾವದಿಂದ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಶ್ರೀಗಳು, ಬಸವತತ್ವದ ಪ್ರತಿಪಾದಕರಾಗಿ ಹಾಗೂ ಕ್ರಾಂತಿಕಾರಿ ವೈಚಾರಿಕ ನಿಲುವಿನ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ಸತ್ಯದ ನಿಲುವುಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಹರಿಹರ ಪೀಠಾಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಸಮ್ಮೇಳನದ ಆಯೋಜಕರು ತಿಳಿಸಿದ್ದಾರೆ.

ಬಸವತತ್ವದ ಪರಿಕಲ್ಪನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರೀಗಳ ಸೇವೆಯನ್ನು ಪರಿಗಣಿಸಿ, ಸಮ್ಮೇಳನದ ಆಯ್ಕೆ ಸಮಿತಿಯ ಸದಸ್ಯರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಶಿವರಾಜ ಅಂಡಗಿ ಹಾಗೂ ಬಿ.ಎಂ. ಪಾಟೀಲ ಕಲೂರ ಅವರನ್ನೊಳಗೊಂಡ ಸಮಿತಿಯು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಬಸವತತ್ವ ಮತ್ತು ಸಂವಿಧಾನದ ಆಶಯಗಳು ಒಂದೇ ದಿಕ್ಕಿನವು

ಬಸವಾದಿ ಶರಣರು ಪ್ರತಿಪಾದಿಸಿದ ಬಸವತತ್ವ ಹಾಗೂ ಭಾರತದ ಸಂವಿಧಾನದ ಸದಾಶಯಗಳು ಒಂದೇ ಆಗಿವೆ. ಶರಣರ ತತ್ವಸಿದ್ಧಾಂತಗಳು ಇಡೀ ಮಾನವಕುಲದ ಅಭಿವೃದ್ಧಿಗೆ ಸಾಧನವಾಗಿವೆ. ಇಂದಿನ ಸಮಾಜದಲ್ಲಿ ಶರಣರ ತತ್ವಗಳ ಅನುಸರಣೆ ಅತ್ಯಂತ ಅಗತ್ಯವಾಗಿದೆ. ಶರಣ ಸಂಸ್ಕೃತಿಯತ್ತ ಜೀವನವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ. ಈ ಆಶಯದೊಂದಿಗೆ ವಿಭಾಗ ಮಟ್ಟದ ಪ್ರಥಮ ವಚನ ಸಾಹಿತ್ಯ ಸಮ್ಮೇಳನವನ್ನು ರೂಪಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button