ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದ ಹಣ ಲೂಟಿಗಾಗಿ ಅಕ್ರಮ ಸಮಿತಿ: ಪಾಟೀಲ್ ಆರೋಪ
ದೇವಸ್ಥಾನದ ಹೆಸರಿನಲ್ಲಿ ಭಕ್ತರಿಂದ ಹಣ, ಕಾಣಿಕೆ ಹಾಗೂ ವಸ್ತುಗಳನ್ನು ಸಂಗ್ರಹಿಸಿ ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪ

ಕಲಬುರಗಿ, ಆ. 19: ಜಿಲ್ಲೆಯ ಕಾಳಗಿ ತಾಲೂಕಿನ ಕನ್ನಡಗಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹೆಸರಿನಲ್ಲಿ ಅಕ್ರಮ ಸಮಿತಿಯೊಂದನ್ನು ರಚಿಸಿಕೊಂಡು ದೇವಸ್ಥಾನದ ಹಣವನ್ನು ಲೂಟಿ ಮಾಡಲು ಕೆಲವರು ಮುಂದಾಗಿದ್ದಾರೆ ಎಂದು ಸದ್ಭಕ್ತ ಮಂಡಳಿಯ ಪರವಾಗಿ ಶಿವಕುಮಾರ್ ಸಿ. ಪಾಟೀಲ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಶ್ರೀ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಆ.24ರಂದು ಶ್ರಾವಣ ಮಾಸದ ಎರಡನೇ ಸೋಮವಾರ ಸಂಜೆ 5.30ಕ್ಕೆ ಹೇರೂರು (ಕೆ) ಗ್ರಾಮದ ಭಜನಾ ಮಂಡಳಿಯ ಆಗಮನ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಹೆಸರಿನಲ್ಲಿ ಕೆಲ ಅವ್ಯವಹಾರಗಳು ನಡೆಯುತ್ತಿವೆ ಎಂದು ದೂರಿದರು.
ದೇವಸ್ಥಾನದ ಮೊದಲ ಟ್ರಸ್ಟ್ 1999ರಲ್ಲಿ ರಚನೆಯಾಗಿದ್ದು, ಮಲ್ಲಿನಾಥ ವಿ. ಪಾಟೀಲ್ ಅವರನ್ನು ಕನ್ನಡಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸೇರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಬೆಣ್ಣೆತೊರಾ ಜಲಾಶಯ ಯೋಜನೆಯಡಿ ದೇವಸ್ಥಾನ ಮುಳುಗಡೆಯಾಗಿದ್ದರಿಂದ ಟ್ರಸ್ಟ್ ಅಧ್ಯಕ್ಷರ ನೇತೃತ್ವದಲ್ಲಿ ದೇವಸ್ಥಾನವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಟ್ರಸ್ಟ್ ಮೂಲಕ 2006ರಲ್ಲಿ ಸರ್ಕಾರದಿಂದ ₹35 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ನಂತರ ಅಧ್ಯಕ್ಷರು ಹಾಗೂ ಎಸ್ಎಲ್ಒ ಸೇರಿದಂತೆ ವಿವಿಧ ಹಂತಗಳಲ್ಲಿ ಒಟ್ಟಾಗಿ ಸುಮಾರು ₹1 ಕೋಟಿ ಅನುದಾನ ಟ್ರಸ್ಟ್ ಹೆಸರಿನಲ್ಲಿ ಬಂದಿದೆ ಎಂದು ಅವರು ತಿಳಿಸಿದರು.
ದೊಡ್ಡ ಪ್ರಮಾಣದ ಅನುದಾನದ ಹಣವನ್ನು ಗಮನಿಸಿ 2020ರಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಅಕ್ರಮ ಸಮಿತಿಯೊಂದನ್ನು ರಚಿಸಿಕೊಂಡಿದ್ದಾರೆ. ಮೂಲ ಟ್ರಸ್ಟ್ನ ಕೆಜಿಬಿ ಬ್ಯಾಂಕ್ ಹೆಬ್ಬಳ್ಳಿ ಶಾಖೆಯಲ್ಲಿರುವ ಹಣವನ್ನು ತಮ್ಮ ಸಮಿತಿಗೆ ವರ್ಗಾಯಿಸುವಂತೆ ಬ್ಯಾಂಕ್ಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಮೂಲ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಬೆದರಿಕೆ ಹಾಕಿ, ಟ್ರಸ್ಟ್ನ ಎಲ್ಲ ಸದಸ್ಯರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಮಾಹಿತಿ ಬ್ಯಾಂಕ್ಗೆ ನೀಡಿದ್ದಾರೆ ಎಂದು ಪಾಟೀಲ್ ಆರೋಪಿಸಿದರು.
ದೇವಸ್ಥಾನದ ಭಕ್ತರಿಗೆ ಸುಳ್ಳು ಆರೋಪಗಳನ್ನು ಮಾಡಿ, ತಾವೇ ದೇವಸ್ಥಾನದ ಹಣ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಮೋಸ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ನೀಡುವ ಹಣ, ಚಿನ್ನ, ಬೆಳ್ಳಿ, ಗುಳಿ, ಅಕ್ಕಿ, ಎಣ್ಣೆ, ಗಂಟೆ ಸೇರಿದಂತೆ ವಿವಿಧ ವಸ್ತುಗಳು ಹಾಗೂ ಧಾನ್ಯಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
ಅಕ್ರಮ ಸಮಿತಿಯ ಹೆಸರಿನಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಕೆಲವರು ಸೇರಿಕೊಂಡು ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡು ಸ್ವಂತ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.
ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ವಿ. ಪಾಟೀಲ್ ಅವರು ಸರ್ಕಾರದಿಂದ ಅನುದಾನ ಪಡೆದು 2009-10ರಲ್ಲಿ ಯಾತ್ರಿಕರ ನಿವಾಸ, 2019-20ರಲ್ಲಿ ರಸ್ತೆ ನಿರ್ಮಾಣ, 2022-23ರಲ್ಲಿ ಸಂಸ್ಕೃತ ಭವನ, 2024-25ರಲ್ಲಿ ಹೈಮಾಸ್ಟ್ ದೀಪಗಳ ವ್ಯವಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು. ಆದರೆ, ಅಕ್ರಮ ಸಮಿತಿಯವರು ಈ ಕಾಮಗಾರಿಗಳಿಗೂ ತಾವೇ ಕಾರಣವೆಂದು ಸುಳ್ಳು ಹೇಳಿ ಭಕ್ತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ದೇವಸ್ಥಾನದಲ್ಲಿರುವ ನಾಲ್ಕು ಕೊಠಡಿಗಳನ್ನು ಕೂಡ ಭಕ್ತರು ನಿರ್ಮಿಸಿಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಯಾವುದೇ ಕಾಣಿಕೆ ನೀಡಿದರೂ ಅದು ಭಕ್ತರ ದೇಣಿಗೆಯಾಗಿದೆ ಎಂದು ಅವರು ಹೇಳಿದರು.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಯಾವುದೇ ರೀತಿಯ ವಂಚನೆಗೆ ಒಳಗಾಗಬಾರದು. ಯಾವುದೇ ರೀತಿಯ ಭಕ್ತಿ ಕಾಣಿಕೆಯನ್ನು ನೀಡಬೇಕಾದರೆ ನೇರವಾಗಿ ದೇವಸ್ಥಾನದ ಹುಂಡಿಯಲ್ಲಿ ಹಾಕಬೇಕು. ರಸೀದಿ ಪಡೆಯದೆ ಯಾರ ಬಳಿಯೂ ಹಣ ನೀಡಬಾರದು. ಪ್ರತಿನಿತ್ಯ ಭಕ್ತರಿಂದ ಬರುವ ಧಾನ್ಯ ಹಾಗೂ ಇತರೆ ವಸ್ತುಗಳನ್ನು ಅಪರಿಚಿತರಿಗೆ ನೀಡಬಾರದು ಎಂದು ಅವರು ಮನವಿ ಮಾಡಿದರು.
ದೇವಸ್ಥಾನದ ನೂತನ ಕಟ್ಟಡವನ್ನು ಶೀಘ್ರದಲ್ಲೇ ಬೇರೆ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ನಿರ್ಮಾಣ ಕಾರ್ಯಕ್ಕೆ ಭಕ್ತಾದಿಗಳು ತಮ್ಮ ದೇಣಿಗೆಯನ್ನು ನೇರವಾಗಿ ನೀಡುವ ಮೂಲಕ ಸಹಕರಿಸಬೇಕು. ಪ್ರಸ್ತುತ ದೇವಸ್ಥಾನವಿರುವ ಸ್ಥಳದಲ್ಲಿ ಯಾವುದೇ ಅಧಿಕೃತ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಣ್ಣೆತೊರಾ ಜಲಾಶಯದ ಹಿನ್ನೀರಿನಲ್ಲಿ ಪ್ರಸ್ತುತ ದೇವಸ್ಥಾನ ಮುಳುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸ್ಥಳಕ್ಕೆ ದೇವಸ್ಥಾನವನ್ನು ಸ್ಥಳಾಂತರಿಸಿ ನೂತನ ಕಟ್ಟಡ ನಿರ್ಮಿಸುವ ಅಗತ್ಯವಿದೆ ಎಂದು ಶಿವಕುಮಾರ್ ಸಿ. ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಣ್ಣಾರಾವ್ ಬಿರಾದಾರ್, ಚೆನ್ನಪ್ಪ ಎಸ್. ಮಾಲಿಪಾಟೀಲ್, ವಿಜಯಕುಮಾರ್ ಪಾಟೀಲ್, ರಾಚೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



