ಧಾರ್ಮಿಕ

ಕೇಸರಿಬೆಟ್ಟದಲ್ಲಿ ದ್ವಿತೀಯ ಸಾಂಬಶಿವಯೋಗಿಗಳ ತಪೋನುಷ್ಠಾನ

ಆ.30ರಂದು ಮಹಾರಾಷ್ಟ್ರದ ಭಕ್ತರಿಂದ ಕೇಸರಿಬೆಟ್ಟಕ್ಕೆ ಪಾದಯಾತ್ರೆ

ಕಲಬುರಗಿ, ಆ.19: ನಗರದ ದಕ್ಷಿಣಕ್ಕೆ ಕೇವಲ 15 ಕಿ.ಮೀ. ದೂರದಲ್ಲಿರುವ ಜೇವರ್ಗಿ ರಸ್ತೆಯ ಪ್ರಕೃತಿ ಮಡಿಲಿನಲ್ಲಿರುವ ಫರತಾಬಾದ್ ಕೇಸರಿಬೆಟ್ಟದಲ್ಲಿ ಶ್ರಾವಣ ಮಾಸದ ಅಂಗವಾಗಿ ಬಾಲತಪಸ್ವಿ ದ್ವಿತೀಯ ಸಾಂಬಶಿವಯೋಗಿಗಳು ತಪೋನುಷ್ಠಾನ ಆರಂಭಿಸಿದ್ದಾರೆ. ಶ್ರಾವಣ ಸೋಮವಾರವಾದ ಆ.30ರಂದು ಮಹಾರಾಷ್ಟ್ರದ ಭಕ್ತರು ಪಾದಯಾತ್ರೆ ಮೂಲಕ ಕೇಸರಿಬೆಟ್ಟಕ್ಕೆ ಆಗಮಿಸಲಿದ್ದಾರೆ ಎಂದು ಸಾಂಬ ಸೇನಾ ಅಫಜಲಪುರ ಜಿಲ್ಲಾ ಅಧ್ಯಕ್ಷ ಶರಣಗೌಡ ಪಾಟೀಲ ನಿಂಬರ್ಗಾ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆ.13ರಿಂದ ಸೆ.12ರವರೆಗೆ ಒಂದು ತಿಂಗಳ ಕಾಲ ಕೇಸರಿಬೆಟ್ಟದಲ್ಲಿ ನಿರಂತರ ಪೂಜಾನುಷ್ಠಾನಗಳು ನಡೆಯಲಿವೆ. ಈ ವರ್ಷ ಕೇಸರಿಬೆಟ್ಟದ ದ್ವಾವಕ ವರ್ಧಂತಿ ಅಂಗವಾಗಿ ಭಕ್ತರಿಂದ 101 ತುಲಾಭಾರ ಸೇವೆ, ಪಾದಪೂಜೆ ಹಾಗೂ ದಾಸೋಹ ಸೇವೆಗಳನ್ನು ಆಯೋಜಿಸಲಾಗಿದೆ ಎಂದರು.

ಪ್ರತಿ ಶ್ರಾವಣ ಸೋಮವಾರದಂದು ರಾಜೋಪಚಾರ ಮಹಾಪೂಜೆ ಸಾಮೂಹಿಕವಾಗಿ ನೆರವೇರಲಿದೆ. ಆ.30ರಂದು ಮಹಾರಾಷ್ಟ್ರದಿಂದ ಭಕ್ತರು ಅತ್ಯಂತ ವೈಭವದಿಂದ ಪಾದಯಾತ್ರೆ ಮೂಲಕ ನಗರದ ಮಾರ್ಗವಾಗಿ ಕೇಸರಿಬೆಟ್ಟಕ್ಕೆ ಆಗಮಿಸಲಿದ್ದಾರೆ. ಸೆ.12ರಂದು ಶನಿವಾರ ಇಷ್ಟಲಿಂಗ ಮಹಾಪೂಜೆಯೊಂದಿಗೆ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿ ಸೇವೆ ಸಲ್ಲಿಸಲಿದ್ದಾರೆ. ವಿವಿಧ ಗ್ರಾಮಗಳ ಭಕ್ತರೂ ಪಾದಯಾತ್ರೆ ಮೂಲಕ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಭಜನೆ, ಸಂಗೀತ, ನೃತ್ಯ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆಯಲಿದ್ದು, ನಿತ್ಯ ತ್ರಿಕಾಲ ಶ್ರೀರುದ್ರಪೂಜೆ, ಅನ್ನದಾಸೋಹ ಹಾಗೂ ವಿವಿಧ ಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕೆಲವು ಸಾಹಿತ್ಯ ಕೃತಿಗಳನ್ನೂ ಬಿಡುಗಡೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅನೇಕ ಪೂಜ್ಯರು, ಮಠಾಧೀಶರು, ಸಾಹಿತಿಗಳು, ಸಮಾಜದ ಮುಖಂಡರು, ಧರ್ಮಾಭಿಮಾನಿಗಳು, ರಾಜಕೀಯ ಗಣ್ಯರು ಹಾಗೂ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಜಾತಿ, ಮತ, ಧರ್ಮ ಹಾಗೂ ಲಿಂಗ ಭೇದವಿಲ್ಲದೆ ಭಕ್ತರು ಮಠಕ್ಕೆ ಆಗಮಿಸಿ ಪೂಜ್ಯರ ದರ್ಶನ ಮತ್ತು ಆಶೀರ್ವಾದ ಪಡೆದು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಆಗಮಿಸುವ ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಶರಣಗೌಡ ಪಾಟೀಲ ನಿಂಬರ್ಗಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎ.ಎಸ್. ಮಲ್ಲಿಕಾರ್ಜುನ ಸಾಮ್ರಾಟ್, ಡಾ. ಶಿವಕುಮಾರ ಶರ್ಮಾ, ಸಾಗರ ಹತ್ತರ್ಗಿ, ಮಂಜುನಾಥ ಮೂಲಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button