ಧಾರ್ಮಿಕ

ಶ್ರಾವಣದ ಮೊದಲ ಹಬ್ಬ ನಾಗರಪಂಚಮಿ ಸಂಭ್ರಮ: ಹುತ್ತಗಳಿಗೆ ಹಾಲೆರೆದ ಮಹಿಳೆಯರು

ಸಹೋದರ–ಸಹೋದರಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬವನ್ನು ಸಂಭ್ರಮದಿಂದ ಆಚರಣೆ

ಕಲಬುರಗಿ, ಆ.17: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ಸಹೋದರ–ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಾಗೂ ಕುಟುಂಬ ಸಂಬಂಧಗಳನ್ನು ವೃದ್ಧಿಸುವ ಹಬ್ಬವಾಗಿ ಕಲಬುರಗಿ ಜಿಲ್ಲೆಯಲ್ಲಿ ಶ್ರದ್ಧಾ–ಭಕ್ತಿಯಿಂದ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ವಿವಾಹವಾದ ನವವಿವಾಹಿತೆ ಮೊದಲ ಬಾರಿಗೆ ಪತಿಯಿಂದ ತವರು ಮನೆಗೆ ನಾಗರಪಂಚಮಿ ಹಬ್ಬಕ್ಕೆ ಬರುವ ಸಂಪ್ರದಾಯವೂ ಹಲವೆಡೆ ಕಂಡುಬಂತು. ಈ ಸಂದರ್ಭದಲ್ಲಿ ತವರು ಮನೆಗೆ ಆಗಮಿಸಿದ ಮಹಿಳೆಯರ ಸಂಭ್ರಮ ಹೇಳತೀರದಾಗಿತ್ತು. ಪತಿಯ ಮನೆಯಿಂದ ತವರಿಗೆ ಮರಳಿದ ಮಹಿಳೆಯರಿಗೆ ತವರು ಮನೆಯವರು ತೋರಿಸುವ ಪ್ರೀತಿ ಹಾಗೂ ಆತ್ಮೀಯತೆ ಅಪಾರವಾಗಿತ್ತು. ಹೀಗಾಗಿ ತವರಿಗೆ ಬಂದ ಮಹಿಳೆಯರು ನಾಗರಪಂಚಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಮಹಿಳೆಯರು ತಮ್ಮ ಮನೆಗಳಿಂದ ತಂದ ಹಾಲನ್ನು ದೇವಸ್ಥಾನದ ಹೊರಗೋಡೆಯಲ್ಲಿರುವ ನಾಗಪ್ಪನಿಗೆ ಎರೆಯುವ ಮೂಲಕ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ನಗರ ಹಾಗೂ ಜಿಲ್ಲೆಯಾದ್ಯಂತ ಹಿಂದೂ ಸಮುದಾಯದವರು ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು. ವಿಶೇಷವಾಗಿ ಮಹಿಳೆಯರು ಹುತ್ತಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಹಾಲು ಎರೆಯುವ ಮೂಲಕ ನಾಗದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ನಗರದ ಪ್ರಾಂತ‌ನಗರದಲ್ಲಿರುವ ಶ್ರೀ ಹನ್ನೆರಡು ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು ಸೇರಿ ಶಿವನಿಗೆ ವಿಶೇಷ ಮಹಾಭಿಷೇಕ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಿದರು.

ನಾಗರಪಂಚಮಿ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಹಾಗೂ ಮಕ್ಕಳಿಗಾಗಿ ಮನೆಗಳಲ್ಲಿ ಮತ್ತು ಹೊರಾಂಗಣದಲ್ಲಿ ಗಿಡಗಳಿಗೆ ಜೋಕಾಲಿ ಕಟ್ಟಲಾಗಿತ್ತು. ಜೋಕಾಲಿ ಆಡುವ ಮೂಲಕ ಮಕ್ಕಳು ಹಾಗೂ ಮಹಿಳೆಯರು ಹಬ್ಬವನ್ನು ಸಂಭ್ರಮಿಸಿದರು. ವಿವಿಧ ಬಗೆಯ ಸಿಹಿ–ಖಾರದ ತಿಂಡಿಗಳನ್ನು ತಯಾರಿಸಿ ಕುಟುಂಬದ ಸದಸ್ಯರು ಸವಿದು ಸಂತಸಪಟ್ಟರು.

ಇತ್ತೀಚಿನ ದಿನಗಳಲ್ಲಿ ಕೆಲ ಪ್ರಗತಿಪರರು ಹುತ್ತಕ್ಕೆ ಹಾಲು ಎರೆಯುವುದನ್ನು ವಿರೋಧಿಸಿ ಬಸವಪಂಚಮಿಯನ್ನು ಆಚರಿಸುವ ಮೂಲಕ ಪರ್ಯಾಯ ಸಂದೇಶ ನೀಡುತ್ತಿದ್ದಾರೆ. ಹುತ್ತಕ್ಕೆ ಹಾಲು ಎರೆಯುವ ಬದಲು ಹಸಿದ, ಅಶಕ್ತ ಹಾಗೂ ನಿರ್ಗತಿಕರಿಗೆ ಹಾಲು ನೀಡಬೇಕು ಎಂಬ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಹಲವೆಡೆ ಹಮ್ಮಿಕೊಳ್ಳಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button