ಬೆಂಗಳೂರಿನ ಸ್ವಾತಂತ್ರ್ಯೋತ್ಸವಕ್ಕೆ ಕಲಬುರಗಿ ಯುವ ಕಲಾವಿದ ಚೇತನ್ ಕೋಬಾಳ್ ಆಯ್ಕೆ
ಜಾನಪದ ಗೀತೆ ಸಂಗೀತ ಕಾರ್ಯಕ್ರಮಕ್ಕೆ ಆಕಾಶವಾಣಿ ಯುವ ಕಲಾವಿದ ಚೇತನ್ ಕೋಬಾಳ್‌ರಿಗೆ ಅವಕಾಶ

ಕಲಬುರಗಿ, ಆ.13: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.15ರಂದು ಬೆಂಗಳೂರಿನ ಬಿಬಿಎಂಪಿ ಸಂಯುಕ್ತ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದ ಪಿಳ್ಳಣ್ಣ ಗಾರ್ಡನ್‌ನಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಬುರಗಿಯ ಯುವ ಕಲಾವಿದ ಚೇತನ್ ಬಿ. ಕೋಬಾಳ್ ಅವರು ಆಯ್ಕೆಯಾಗಿದ್ದಾರೆ.
ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚೇತನ್ ಕೋಬಾಳ್ ಅವರು ಜಾನಪದ ಗೀತೆ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ಯುವ ಕಲಾವಿದ ಚೇತನ್ ಕೋಬಾಳ್ ಅವರ ಆಯ್ಕೆಗೆ ರಂಭಾಪುರಿ ಪೀಠದ ವಾತಾ೯ಧಿಕಾರಿ ಸಿದ್ಧರಾಮಪ್ಪ ಆಲಗುಡಕರ್, ವೀರೇಶ ಶಾಸ್ತ್ರಿಗಳು ಮಲಕೂಡ, ಎಂ. ನಾಗಲಿಂಗಯ್ಯ ಶಾಸ್ತ್ರಿಗಳು ಸುಂಟನೂರು, ರೇವಣಯ್ಯ ಸ್ವಾಮಿ ಸುಂಟನೂರು, ಮಡಿವಾಳಯ್ಯ ಸಾಲಿಮಠ, ವಿಜಯಕುಮಾರ್ ಸಾಲಿಮಠ ಸೇರಿದಂತೆ ಹಲವು ಗಣ್ಯರು ಹಾಗೂ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.
ಆಕಾಶವಾಣಿ ಕಲಾವಿದರಾದ ಮಹಾಂತಪ್ಪ ಮಂದೇವಾಲ, ಸೈದಪ್ಪ ಚೌಡಾಪುರ, ರವಿಸ್ವಾಮಿ ಗೊಟೂರ್, ಬಲಭೀಮ್ ನೆಲೋಗಿ, ಸಿದ್ಧರಾಮಪ್ಪ ಮುಂಡೋಳಗಿ ಸೇರಿದಂತೆ ಅನೇಕರು ಚೇತನ್ ಕೋಬಾಳ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯೋತ್ಸವ ಪುರಸ್ಕೃತ ಕಲಾವಿದ ಬಾಬುರಾವ್ ಕೋಬಾಳ್, ದೇವೇಂದ್ರ ಯಡ್ರಾಮಿ, ಕಾಂಗ್ರೆಸ್ ಹಿರಿಯ ಮುಖಂಡ ವಿಜಯಕುಮಾರ್ ಹಡಗಲ್, ನಾಗೇಂದ್ರ ಸಪ್ಪನಗೋಳ್, ಸಾಗರ್ ಭೀಮಳ್ಳಿ, ಅನಿಲ್‌ಕುಮಾರ್ ಮಠಪತಿ, ಶಿವರಾಜ ಉಳ್ಳಿ, ಅಭಿಷೇಕ ವಿಶ್ವಕರ್ಮ ಕೊಡ್ಲಾ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.
ಹಿರಿಯ ಕಲಾವಿದ ಬಾಬುರಾವ್ ಕೋಬಾಳ್ ಅವರ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅವರ ಪುತ್ರ ಚೇತನ್ ಕೋಬಾಳ್ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಹಳೆಯ ಮೈಸೂರು ಭಾಗದಲ್ಲಿಯೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಯುವ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚೇತನ್ ಕೋಬಾಳ್ ಆಯ್ಕೆಯಾಗಿರುವುದು ಅವರ ಕಲಾ ಪ್ರತಿಭೆಗೆ ಮತ್ತೊಂದು ಗೌರವವಾಗಿದ್ದು, ಜಿಲ್ಲೆಯ ಕಲಾಸಕ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.



