ನೀಲಾಂಬಿಕಾ ಕಲಾಕೃತಿಗಳಿಗೆ ಮೆಚ್ಚುಗೆ: ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು
ಮಹಿಳಾ ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲಿ ತಮ್ಮ ಕಲಾ ಪ್ರತಿಭೆ ಅನಾವರಣಗೊಳಿಸಲಿ: ಮಂಜುಳಾ ಜಾನೆ

ಕಲಬುರಗಿ, ಆ.13: ಕಲಾವಿದರಿಗೆ ಕಲೆಯೇ ಸಂಪತ್ತು. ಕಲೆ ಮತ್ತು ಸಂಸ್ಕೃತಿಗಳು ದೇಶದ ಅಮೂಲ್ಯ ಸಂಪತ್ತಾಗಿದ್ದು, ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ ಎಂದು ಹಿರಿಯ ಚಿತ್ರಕಲಾವಿದೆ ಹಾಗೂ ಕೃತಿಕ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಬಿ. ಜಾನೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದೊಂದಿಗೆ ವಿಜಯನಗರ ಕಾಲೋನಿಯಲ್ಲಿರುವ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಶ್ರೀಮತಿ ನೀಲಾಂಬಿಕಾ ಹಿರೇಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತರಾಗಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಚಿತ್ರಕಲೆಯೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರು ವೃತ್ತಿಯೊಂದಿಗೆ ತಮ್ಮದೇ ಆದ ಸಾಧನೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ರಕಲಾವಿದ ಬಿ.ಎನ್. ಪಾಟೀಲ್ ಮಾತನಾಡಿ, ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕಲಾ ಕ್ಷೇತ್ರ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ. ಶ್ರೀಮತಿ ನೀಲಾಂಬಿಕಾ ಅವರ ಕಲಾಕೃತಿಗಳಲ್ಲಿ ರೇಖೆ, ಬಣ್ಣ ಹಾಗೂ ಮೈವಳಿಕೆಯ ಸಮತೋಲನ ಕಾಣಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಮಹಿಳಾ ಕಲಾವಿದರು ರಾಜ್ಯದ ಗಡಿ ದಾಟಿ ತಮ್ಮ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿ ಯಶಸ್ವಿಯಾಗಬೇಕು ಎಂದು ಅವರು ಆಶಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿನಯಕುಮಾರ್ ರುದ್ರಸ್ವಾಮಿಮಠ ಮಾತನಾಡಿ, ಚಿತ್ರಕಲಾ ಕ್ಷೇತ್ರಕ್ಕೆ ಮಹಿಳಾ ಕಲಾವಿದರ ಕೊಡುಗೆ ಅಪಾರವಾಗಿದೆ. ಅಮೃತಾ ಶೇರ್-ಗಿಲ್, ನಳಿನಿ ಮಳಿನಿ, ಅನುಪಮಾ ಸೂದ್, ಪುಷ್ಪಮಾಲಾ ಸೇರಿದಂತೆ ಅನೇಕ ಮಹಿಳಾ ಕಲಾವಿದರು ಭಾರತೀಯ ಚಿತ್ರಕಲಾ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶ್ರೀಮತಿ ನೀಲಾಂಬಿಕಾ ಅವರ ವರ್ಣಚಿತ್ರಗಳಲ್ಲಿ ಆಧುನಿಕತೆಯ ಸ್ಪರ್ಶದೊಂದಿಗೆ ರೇಖಾಚಿತ್ರಗಳಲ್ಲಿ ಶೈಕ್ಷಣಿಕ ಕಲಿಕಾ ಶೈಲಿಯನ್ನೂ ಕಾಣಬಹುದು ಎಂದು ಅವರು ವಿಶ್ಲೇಷಿಸಿದರು.
ಭಾರತದಲ್ಲಿ ಶೇ.46ರಷ್ಟು ಮಹಿಳಾ ಕಲಾವಿದರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಲ್ಪಕಲೆ, ಪ್ರತಿಷ್ಠಾಪನಾ ಕಲೆ, ಚಿತ್ರಕಲೆ, ಗ್ರಾಫಿಕ್ ಸೇರಿದಂತೆ ಹಲವು ಹೊಸ ಮಾಧ್ಯಮಗಳಲ್ಲಿ ಮಹಿಳೆಯರು ಶ್ರೇಷ್ಠ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ ಎಂಬುದು ಆರ್ಟ್ ಇಂಡಿಯಾ ಸಮೀಕ್ಷೆಯಿಂದ ತಿಳಿದುಬಂದಿದೆ. ಕರ್ನಾಟಕದಲ್ಲಿ ಶೇ.35ರಷ್ಟು ಮಹಿಳಾ ಕಲಾವಿದರು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಮಹಿಳೆಯರು ಕಲಾ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕಲಾ ಪ್ರದರ್ಶನಗಳಲ್ಲಿ ಮಹಿಳಾ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಅವರು ಹೇಳಿದರು.
ಅನುಚಂದ್ರ ಆರ್ಟ್ ಸ್ಟುಡಿಯೋ ಮುಖ್ಯಸ್ಥ ಚಂದ್ರಹಾಸ ಜಾಲಿಹಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಸವರಾಜ್ ಜಾನೆ, ನಿಂಗಣ್ಣ ಕೇರಿ, ದಾನಯ್ಯ ಚೌಕಿಮಠ, ಡಾ. ಪರಶುರಾಮ, ಡಾ. ಕೆ.ಎಂ. ಕುಮಾರಸ್ವಾಮಿ, ಮಹೇಶ್ ಎಂ., ಮಲ್ಲಿಕಾರ್ಜುನ ಕೋರಳ್ಳಿ, ಸಂಗಮೇಶ್ ಚಿಲಶೆಟ್ಟಿ, ಕಾವ್ಯ ಗಡ್ಡಿ, ಸೂರ್ಯಕಾಂತ್ ನಂದೂರ್, ಶಶಿಕಾಂತ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕು. ಲಕ್ಷ್ಮೀ ಬೇರೂರು ಪ್ರಾರ್ಥನಾ ಗೀತೆ ಹಾಡಿದರು. ಶ್ರೀಮತಿ ಕವಿತಾ ಕಟ್ಟೆ ಸ್ವಾಗತಿಸಿದರು. ಶ್ರೀಮತಿ ನೀಲಾಂಬಿಕಾ ವಂದಿಸಿದರು. ಮಲ್ಲಿಕಾರ್ಜುನ ಮುಗಳಿ ಕಾರ್ಯಕ್ರಮ ನಿರ್ವಹಿಸಿದರು.



