ನ್ಯಾಯಾಲಯದ ಆದೇಶ ವಿರೋಧಿಸಿ ಸಿದ್ಧರಾಮೇಶ್ವರ ಕಾಲೋನಿ ನಿವಾಸಿಗಳ ಪ್ರತಿಭಟನೆ
ಮನೆ ಹಾಗೂ ಕಟ್ಟಡ ತೆರವು ಕ್ರಮಕ್ಕೆ ತೀವ್ರ ವಿರೋಧ; ರಸ್ತೆ ತಡೆ ನಡೆಸಿ ನಿವಾಸಿಗಳ ಆಕ್ರೋಶ

ನಗರದ ಆಳಂದ ಚೆಕ್ಪೋಸ್ಟ್ ಸಮೀಪದ ಸಿದ್ಧರಾಮೇಶ್ವರ ಕಾಲೋನಿಯಲ್ಲಿ ಮನೆ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತೆರವು ಕಾರ್ಯಾಚರಣೆಗೆ ಬಂದ ಅಧಿಕಾರಿಗಳನ್ನು ನಿವಾಸಿಗಳು ತಡೆದು ಪ್ರತಿಭಟನೆ ನಡೆಸಿದರು.
ಸಿಜೆಎಂ ನ್ಯಾಯಾಲಯದ ಆದೇಶದಂತೆ ಸರ್ವೇ ಸಂಖ್ಯೆ 36 ಮತ್ತು 95ರ ವ್ಯಾಪ್ತಿಯಲ್ಲಿರುವ ಮನೆ ಹಾಗೂ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ನೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನೂರಾರು ನಿವಾಸಿಗಳು ರಸ್ತೆ ತಡೆ ನಡೆಸಿ, ಮನೆಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿದರು.
ಸುಮಾರು 30ರಿಂದ 40 ವರ್ಷಗಳ ಹಿಂದೆ ಮೂಲ ಜಮೀನಿನ ಮಾಲೀಕರಿಂದ ನೋಟರಿ ಒಪ್ಪಂದದ ಮೂಲಕ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಈಗ ಈ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ. ಆದರೆ ಜಮೀನಿನ ಮಾಲೀಕರು 13 ಎಕರೆ ಭೂಮಿ ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದು, ಅದರ ಆಧಾರದ ಮೇಲೆ ತೆರವು ಆದೇಶ ಹೊರಡಿಸಲಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಅಧಿಕಾರಿಗಳು ಮತ್ತು ನಿವಾಸಿಗಳ ನಡುವೆ ವಾಗ್ವಾದವೂ ನಡೆಯಿತು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ತೆರವು ಕಾರ್ಯಾಚರಣೆ ನಡೆಸದೇ ಸ್ಥಳದಿಂದ ಹಿಂದಿರುಗಿದರು.
“ನಾವು ಕಾನೂನುಬದ್ಧವಾಗಿ ಹಣ ನೀಡಿ ನಿವೇಶನ ಖರೀದಿಸಿ ಮನೆ ಕಟ್ಟಿದ್ದೇವೆ. ನಮ್ಮ ಪ್ರಾಣ ಹೋದರೂ ಮನೆಗಳನ್ನು ಬಿಟ್ಟು ಹೋಗುವುದಿಲ್ಲ. ತಪ್ಪು ಮಾಹಿತಿಯ ಆಧಾರದ ಮೇಲೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ಆದೇಶದಿಂದ ಮಹಿಳೆಯರು ಸೇರಿದಂತೆ ಎಲ್ಲ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ,” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಹಾಗೂ ಮಹಾನಗರ ಪಾಲಿಕೆ ಸದಸ್ಯ ಸಚಿನ್ ಕಡಗಂಚಿ ಬೆಂಬಲ ಸೂಚಿಸಿದರು. ಬಲವಂತದ ತೆರವು ಕಾರ್ಯಾಚರಣೆ ನಡೆಸಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದರು.



