ಅಪರಾಧ

ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲ ಎಂಬ ಕೋಪಕ್ಕೆ ಅಪ್ರಾಪ್ತ ಸಹೋದರಿಯರ ಆತ್ಮಹತ್ಯೆ

ಶಹಾಬಾದ್ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ದುರ್ಘಟನೆ; ಪ್ರಕರಣ ದಾಖಲು, ತನಿಖೆ ಮುಂದುವರಿಕೆ

ಕಲಬುರಗಿ, ಆ.13: ಕುಡಿತದ ವ್ಯಸನಿಯಾಗಿದ್ದ ತಂದೆ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಅಪ್ರಾಪ್ತ ಸಹೋದರಿಯರಿಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.

ಮೃತರನ್ನು ಹನುಮಂತಿ ತಂದೆ ಹನುಮಂತ ದಂಡಗುಲಕರ್ (18) ಹಾಗೂ ಪೂಜಾ ತಂದೆ ಹನುಮಂತ ದಂಡಗುಲಕರ್ (17) ಎಂದು ಗುರುತಿಸಲಾಗಿದೆ.

ಹನುಮಂತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದರೆ, ಪೂಜಾ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗೆ ಪೊಲೀಸ್ ಇಲಾಖೆಯ ವತಿಯಿಂದ ನಡೆದ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂಜಾ ಬಹುಮಾನ ಪಡೆದಿದ್ದಳು ಎಂದು ತಿಳಿದುಬಂದಿದೆ.

ಮೃತ ಸಹೋದರಿಯರ ತಂದೆ ಮಾಜಿ ಸೈನಿಕರಾಗಿದ್ದು, ಕುಟುಂಬದಲ್ಲಿ ಒಟ್ಟು ಆರು ಮಕ್ಕಳಿದ್ದಾರೆ. ಅವರ ಪತ್ನಿ ಹಾಗೂ ಓರ್ವ ಪುತ್ರ ಮೃತಪಟ್ಟಿದ್ದು, ಇಬ್ಬರು ಪುತ್ರಿಯರಿಗೆ ವಿವಾಹ ಮಾಡಿಕೊಡಲಾಗಿದೆ. ಅವರು ತಮ್ಮ ಪತಿಯ ಮನೆಗಳಲ್ಲಿ ವಾಸವಾಗಿದ್ದಾರೆ. ಮತ್ತೋರ್ವ ಪುತ್ರ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮೃತ ಇಬ್ಬರು ಅಪ್ರಾಪ್ತ ಸಹೋದರಿಯರು ಶಹಾಬಾದ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.

ಮುಂಬರುವ ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆಗಳನ್ನು ಕೊಡಿಸುವಂತೆ ಸಹೋದರಿಯರು ತಂದೆಯನ್ನು ಕೇಳಿದ್ದರು ಎನ್ನಲಾಗಿದೆ. ಆದರೆ ಮದ್ಯವ್ಯಸನಿಯಾಗಿದ್ದ ತಂದೆ ಬಟ್ಟೆ ಕೊಡಿಸಲು ನಿರಾಕರಿಸಿದ್ದರಿಂದ ಇಬ್ಬರೂ ಮನನೊಂದು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

1ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button