ಕೆ.ಕೆ.ಆರ್.ಟಿ.ಸಿ. ಕೇಂದ್ರ ಕಚೇರಿಗೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಭೇಟಿ
ನಿಗಮದ ಕಾರ್ಯಾಚರಣೆ, ಶಕ್ತಿ ಯೋಜನೆ, ಆರ್ಥಿಕ ಸ್ಥಿತಿಗತಿ ಹಾಗೂ ಬಸ್ಗಳ ನಿರ್ವಹಣೆ ಪರಿಶೀಲನೆ

ಕಲಬುರಗಿ, ಆ.13: ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ ಹಾಗೂ ಸದಸ್ಯರು ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ಕೇಂದ್ರ ಕಚೇರಿ, ವಿವಿಧ ಘಟಕಗಳು ಹಾಗೂ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದರು.
ಸಮಿತಿಯ ಸದಸ್ಯರಾದ ಸರ್ಕಾರದ ನಿವೃತ್ತ ಕಾರ್ಯದರ್ಶಿ ದ್ವಾರಕನಾಥ ಬಾಬು ಹಾಗೂ ಡಾ. ಅಬ್ದುಲ್ ಪಿಂಜರಿ ಅವರನ್ನೊಳಗೊಂಡ ತಂಡವು ಕೆಕೆಆರ್ಟಿಸಿ ಕೇಂದ್ರ ಕಚೇರಿ, ಕಲಬುರಗಿ ಘಟಕ-1, ಘಟಕ-2, ಘಟಕ-4, ಕೇಂದ್ರ ಬಸ್ ನಿಲ್ದಾಣ ಹಾಗೂ ವಿಭಾಗೀಯ ಕಾರ್ಯಾಗಾರಗಳಿಗೆ ಭೇಟಿ ನೀಡಿ ನಿಗಮದ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಪಡೆದುಕೊಂಡಿತು.
ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಮಿತಿಯು ನಿಗಮದ ಕಾರ್ಯಾಚರಣೆ, ಶಕ್ತಿ ಯೋಜನೆಯ ಅನುಷ್ಠಾನ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ವಿವರವಾದ ಮಾಹಿತಿ ಪಡೆಯಿತು. ಬಳಿಕ ವಿವಿಧ ಘಟಕಗಳಿಗೆ ಭೇಟಿ ನೀಡಿ ಬಸ್ಗಳ ನಿರ್ವಹಣೆ, ಸ್ವಚ್ಛತೆ, ಡಿ.ಸಿ.ಎಸ್. ತಂತ್ರಾಂಶ ಹಾಗೂ ಸ್ಮಾರ್ಟ್ ಇ.ಟಿ.ಎಂ. ಬಳಕೆಯ ಕುರಿತು ಪರಿಶೀಲನೆ ನಡೆಸಿತು.
ಕೇಂದ್ರ ಬಸ್ ನಿಲ್ದಾಣಕ್ಕೂ ಭೇಟಿ ನೀಡಿದ ಸಮಿತಿ ಸದಸ್ಯರು ಪ್ರಯಾಣಿಕರು ಹಾಗೂ ಚಾಲನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಸಾರಿಗೆ ಸೇವೆಗಳ ಕುರಿತು ಅವರ ಅಭಿಪ್ರಾಯ ಹಾಗೂ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಶೀಲಾ ಬಿ., ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ವಿ.ಹೆಚ್., ಮುಖ್ಯ ಯಾಂತ್ರಿಕ ಅಭಿಯಂತರ ಸಂತೋಷ್ ಗೋಗೇರಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜ ಬೆಳಗಾವಿ, ಉಪಮುಖ್ಯ ಯೋಜನೆ ಮತ್ತು ಸಂಖ್ಯಾಧಿಕಾರಿ ಜಗದೀಶ ನಾಯಕ ಸೇರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.



