ಶ್ರವಣ ಸಮಸ್ಯೆ ಪತ್ತೆಗೆ ಆರಂಭಿಕ ತಪಾಸಣೆ ಅಗತ್ಯ: ಇಕ್ರಂ ಶರೀಫ್
ರಾಷ್ಟ್ರೀಯ ಕಿವುಡುತನ ನಿಯಂತ್ರಣ ಕಾರ್ಯಕ್ರಮದಡಿ 13 ಮಕ್ಕಳಿಗೆ ಶ್ರವಣ ಸಾಧನ ವಿತರಣೆ

ಕಲಬುರಗಿ, ಆ. 8: ಮಕ್ಕಳಲ್ಲಿ ಶ್ರವಣ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಅವರ ಭಾಷಾ ಬೆಳವಣಿಗೆ, ಶಿಕ್ಷಣ ಹಾಗೂ ಸಾಮಾಜಿಕ ಬದುಕು ಸುಧಾರಿಸಲು ಸಾಧ್ಯವಾಗುತ್ತದೆ. ಹೀಗಾಗಿ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳನ್ನು ತ್ವರಿತವಾಗಿ ಗುರುತಿಸಿ ಅಗತ್ಯ ವೈದ್ಯಕೀಯ ಸೇವೆ ಹಾಗೂ ಶ್ರವಣ ಸಾಧನಗಳನ್ನು ಒದಗಿಸಲು ಆರೋಗ್ಯ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ) ಅಡಿಯಲ್ಲಿ ರಾಷ್ಟ್ರೀಯ ಕಿವುಡುತನ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 13 ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಿಮ್ಸ್ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಶ್ರವಣ ಸಮಸ್ಯೆ ಪತ್ತೆ ಹಾಗೂ ಚಿಕಿತ್ಸೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಡಿ ಇದುವರೆಗೆ 4,574 ಫಲಾನುಭವಿಗಳಿಗೆ ಶ್ರವಣ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 914 ಮಂದಿಯಲ್ಲಿ ಶ್ರವಣ ಸಮಸ್ಯೆ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶ್ರವಣ ಸಮಸ್ಯೆ ಪತ್ತೆಯಾದವರಲ್ಲಿ 205 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಗುರುತಿಸಲಾಗಿದ್ದು, ಈಗಾಗಲೇ 125 ಮಂದಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಲ್ಲದೆ 295 ಮಂದಿಗೆ ಶ್ರವಣ ಸಾಧನಗಳನ್ನು ವಿತರಿಸಲಾಗಿದೆ. 43 ಮಂದಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿದ್ದು, 1,331 ಮಂದಿಗೆ ಔಷಧೋಪಚಾರದ ಮೂಲಕ ಚಿಕಿತ್ಸೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಮಕ್ಕಳಲ್ಲಿ ಶ್ರವಣ ಸಮಸ್ಯೆಯನ್ನು ಶಾಲಾ ಹಂತದಲ್ಲಿಯೇ ಗುರುತಿಸಿ ತ್ವರಿತವಾಗಿ ಚಿಕಿತ್ಸೆ ನೀಡುವುದು ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳಿಗೂ ಆರೋಗ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಿ, ಶ್ರವಣ ಸಮಸ್ಯೆ ಹೊಂದಿರುವ ಪ್ರತಿಯೊಬ್ಬ ಮಗುವಿಗೂ ತಪಾಸಣೆ ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯ ತಲುಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಸಂಕನೂರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಸರ್ಜನ್ ಡಾ. ಅಸ್ನಾ ರಬಾ ರುಕಿಯಾ, ಡಾ. ಸಾಧಿಕ್ ಹುಸೇನ್, ಡಾ. ರೇಣುಕಾ ಮೇಳಕುಂದಿ, ಡಾ. ಸಂತೋಷ್ ಆಲಗೂಡ್ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ಕಿವಿ-ಮೂಗು-ಗಂಟಲು (ಇಎನ್ಟಿ) ತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.



