ಜೇವರ್ಗಿ ಜನರ ಆಶೀರ್ವಾದದಿಂದ ಸಚಿವ ಸ್ಥಾನ: ಡಾ. ಅಜಯಸಿಂಗ್
'ಇದು ನನ್ನ ಸಾಧನೆಯಲ್ಲ, ಜನರ ವಿಶ್ವಾಸದ ಫಲ'; ಪ್ರಾಮಾಣಿಕ ಸೇವೆಯ ಮೂಲಕ ಋಣ ತೀರಿಸುವುದಾಗಿ ನೂತನ ಸಚಿವರ ಭರವಸೆ

ಕಲಬುರಗಿ, ಆ.3: “ಇದು ಕೇವಲ ನನ್ನ ಸಾಧನೆಯಲ್ಲ. ಜೇವರ್ಗಿಯ ಪ್ರತಿಯೊಬ್ಬ ಮತದಾರ, ಪ್ರತಿಯೊಂದು ಮನೆ ಮತ್ತು ಪ್ರತಿಯೊಂದು ಹೃದಯದ ಆಶೀರ್ವಾದದ ಫಲವಾಗಿದೆ. ಮೂರು ಬಾರಿ ನನ್ನನ್ನು ವಿಧಾನಸಭೆಗೆ ಕಳುಹಿಸಿದ ಜೇವರ್ಗಿ ಕ್ಷೇತ್ರದ ಜನತೆ ಇಂದು ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದು, ಈ ಋಣವನ್ನು ಪ್ರಾಮಾಣಿಕ ಸೇವೆಯ ಮೂಲಕ ತೀರಿಸಲು ಪ್ರಯತ್ನಿಸುತ್ತೇನೆ” ಎಂದು ನೂತನ ಸಚಿವ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಚಿವ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ತಾಯಿಯ ಆಶೀರ್ವಾದ ಪಡೆದು, ತಂದೆ ಧರ್ಮಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿರುವುದು ರಾಜ್ಯದ ಜನತೆಗೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವದಿಂದ ಈ ಭಾಗದ ಜನರ ಆಶೋತ್ತರಗಳನ್ನು ಸಮೀಪದಿಂದ ಅರಿತಿದ್ದೇನೆ. ರೈತರು, ಕಾರ್ಮಿಕರು, ಯುವಜನರು ಹಾಗೂ ಮಹಿಳೆಯರ ಬದುಕಿನಲ್ಲಿ ಉತ್ತಮ ಬದಲಾವಣೆ ತರಲು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅವಕಾಶ ಈಗ ದೊರೆತಿದೆ ಎಂದು ತಿಳಿಸಿದರು.
ತಮಗೆ ಸಚಿವ ಸ್ಥಾನ ನೀಡುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಪಕ್ಷದ ನಾಯಕರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಮಾತಿನ ಮೂಲಕವಲ್ಲ, ಕೆಲಸ ಮತ್ತು ಫಲಿತಾಂಶಗಳ ಮೂಲಕ ಸಾಬೀತುಪಡಿಸುತ್ತೇನೆ ಎಂದು ಡಾ. ಅಜಯಸಿಂಗ್ ಹೇಳಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಜೇವರ್ಗಿ ಕ್ಷೇತ್ರದ ಪ್ರಗತಿಯೇ ತಮ್ಮ ಮೊದಲ ಆದ್ಯತೆಯಾಗಿದ್ದು, ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ವಿನಮ್ರತೆಯಿಂದ ಕೆಲಸ ಮಾಡುತ್ತೇನೆ. ಜನರ ಆಶೀರ್ವಾದ ಸದಾ ತಮ್ಮೊಂದಿಗೆ ಇರಲಿ ಎಂದು ಅವರು ಮನವಿ ಮಾಡಿದರು.



