ಜಿಲ್ಲಾಸುದ್ದಿ

ಹಾಗರಗಾ ನಿವೇಶನ ಹಂಚಿಕೆ ಲಾಟರಿ ಮುಂದೂಡಲು ಆಗ್ರಹಿಸಿ ಧರಣಿ

ಅರ್ಹ–ಅನರ್ಹ ಅರ್ಜಿದಾರರ ಪಟ್ಟಿ ಪ್ರಕಟಿಸಿ ಬಳಿಕವೇ ಲಾಟರಿ ನಡೆಸುವಂತೆ ಒತ್ತಾಯ

ಕಲಬುರಗಿ, ಆ.3: ನಗರದ ಹೊರವಲಯದಲ್ಲಿರುವ ಹಾಗರಗಾ 50:50 ಪಾಲುದಾರಿಕೆ ವಸತಿ ಯೋಜನೆಯ ನಿವೇಶನ ಹಂಚಿಕೆಗೆ ನಿಗದಿಪಡಿಸಿರುವ ಲಾಟರಿ ಪ್ರಕ್ರಿಯೆಯನ್ನು ತಕ್ಷಣ ಮುಂದೂಡಬೇಕು. ಮೊದಲು ಅರ್ಹ ಹಾಗೂ ಅನರ್ಹ ಅರ್ಜಿದಾರರ ಪಟ್ಟಿಯನ್ನು ಸಿದ್ಧಪಡಿಸಿ, ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಭೀಮಶಕ್ತಿ ಸಂಘಟನೆ ಕಾರ್ಯಕರ್ತರು ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ) ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಅಂಬಾಜಿ ಪಿ. ಮೇಟಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ. ಮುಡ್ಡಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಎಂ.ಡಿ. ಇಸಾಮುದ್ದೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನೆಯ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಹಾಗರಗಾ 50:50 ಪಾಲುದಾರಿಕೆ ವಸತಿ ಯೋಜನೆಯಡಿ ವಿವಿಧ ಅಳತೆಯ ನಿವೇಶನಗಳ ಹಂಚಿಕೆಗಾಗಿ 2025ರ ಜುಲೈನಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಾವಿರಾರು ಜನರು ಅರ್ಜಿ ಸಲ್ಲಿಸಿ ನೋಂದಣಿ ಶುಲ್ಕವನ್ನೂ ಪಾವತಿಸಿದ್ದಾರೆ. ಆದರೆ ಒಂದು ವರ್ಷ ವಿಳಂಬದ ಬಳಿಕ ಇದೀಗ ಆಗಸ್ಟ್ 4 ಮತ್ತು 5ರಂದು ಲಾಟರಿ ಮೂಲಕ ಹಂಚಿಕೆ ನಡೆಸಲು ದಿನಾಂಕ ನಿಗದಿಪಡಿಸಿರುವುದು ಆತಂಕಕಾರಿ ಎಂದು ಹೇಳಿದರು.

ಅರ್ಜಿಗಳ ಸಮಗ್ರ ಪರಿಶೀಲನೆ ನಡೆಸದೆ ಹಾಗೂ ಅರ್ಹತೆ ಪರಿಶೀಲಿಸದೆ ಲಾಟರಿ ಪ್ರಕ್ರಿಯೆ ನಡೆಸಿದರೆ ಅನರ್ಹರಿಗೆ ನಿವೇಶನ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಕೂಡ ಸಮರ್ಪಕ ಪರಿಶೀಲನೆ ಇಲ್ಲದೆ ಲಾಟರಿ ನಡೆಸಿದ ಪರಿಣಾಮ ಒಂದೇ ಕುಟುಂಬದ ಸದಸ್ಯರಿಗೆ ಎರಡು–ಮೂರು ನಿವೇಶನಗಳು ಹಂಚಿಕೆಯಾದ ಉದಾಹರಣೆಗಳಿವೆ ಎಂದು ಆರೋಪಿಸಿದರು.

ಇಂತಹ ಕ್ರಮಗಳಿಂದ ನಿಜವಾದ ಬಡವರು, ಭೂಹೀನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಆರ್ಥಿಕವಾಗಿ ಹಿಂದುಳಿದ ಅರ್ಹ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಆದ್ದರಿಂದ ಈಗಾಗಲೇ ನಿಗದಿಪಡಿಸಿರುವ ಲಾಟರಿ ದಿನಾಂಕವನ್ನು ತಕ್ಷಣ ಮುಂದೂಡಬೇಕು. ಎಲ್ಲಾ ಅರ್ಜಿಗಳ ಸಮಗ್ರ ಪರಿಶೀಲನೆ ನಡೆಸಿ ಅರ್ಹ ಹಾಗೂ ಅನರ್ಹ ಅರ್ಜಿದಾರರ ಪ್ರತ್ಯೇಕ ಪಟ್ಟಿಯನ್ನು ಸಾರ್ವಜನಿಕರ ಪರಿಶೀಲನೆಗೆ ಪ್ರಕಟಿಸಬೇಕು. ಈಗಾಗಲೇ ಸರ್ಕಾರದ ಯಾವುದೇ ವಸತಿ ಯೋಜನೆಯಡಿ ನಿವೇಶನ ಪಡೆದಿರುವವರು ಅಥವಾ ನಿಯಮಾನುಸಾರ ಅನರ್ಹರಾಗಿರುವವರನ್ನು ಪಟ್ಟಿಯಿಂದ ಕೈಬಿಡಬೇಕು. ಇದುವರೆಗೆ ಯಾವುದೇ ನಿವೇಶನ ಪಡೆಯದ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ನಿಯಮಾನುಸಾರ ಹಂಚಿಕೆ ಮಾಡಬೇಕು. ಸಂಪೂರ್ಣ ಪರಿಶೀಲನೆ ಮುಗಿದ ಬಳಿಕ ಹೊಸ ದಿನಾಂಕ ನಿಗದಿಪಡಿಸಿ ಪಾರದರ್ಶಕವಾಗಿ ಲಾಟರಿ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button