ಪತ್ತೇಪುರ ಯುವಕರ ದುರ್ಮರಣ: ಮೃತರ ಕುಟುಂಬಗಳಿಗೆ ಡಾ. ಉಮೇಶ್ ಜಾಧವ್ ಸಾಂತ್ವನ
ಅಪಘಾತ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ; ಅಗತ್ಯ ನೆರವು ಒದಗಿಸುವ ಭರವಸೆ

ಚಿಂಚೋಳಿ, ಆ.3: ವಿಧಾನಸಭಾ ಕ್ಷೇತ್ರದ ಪತ್ತೇಪುರ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಅನಿಲ್‌ಕುಮಾರ್ ಅವರ ತಂದೆ ನರಸಿಮಲು ಸಂಬು ಹಾಗೂ ವೆಂಕಟೇಶ್ ಅವರ ತಂದೆ ಪ್ರಭು ಅವರ ಕುಟುಂಬಗಳಿಗೆ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಡಾ. ಉಮೇಶ್ ಜಾಧವ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಮೃತರ ಕುಟುಂಬದವರ ದುಃಖದಲ್ಲಿ ಭಾಗಿಯಾಗಿದ್ದ ಡಾ. ಉಮೇಶ್ ಜಾಧವ್, ಅವರ ನೋವನ್ನು ಹಂಚಿಕೊಂಡು ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಅಗತ್ಯವಿರುವ ಎಲ್ಲ ರೀತಿಯ ನೆರವು ದೊರೆಯುವಂತೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಘಟನೆಯ ಕುರಿತು ಸ್ಥಳೀಯರು ವ್ಯಕ್ತಪಡಿಸಿದ ಆತಂಕವನ್ನು ಗಂಭೀರವಾಗಿ ಪರಿಗಣಿಸಿದ ಅವರು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಆಂಬುಲೆನ್ಸ್ ಸಮಯಕ್ಕೆ ಆಗಮಿಸದಿರುವ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಯುವಕರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಡಾ. ಉಮೇಶ್ ಜಾಧವ್, ಮೃತರ ಕುಟುಂಬಗಳೊಂದಿಗೆ ಸದಾ ನಿಲ್ಲುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



