ಧಾರ್ಮಿಕ

ನಿವೃತ್ತಿ ಜೀವನ ಅಂತ್ಯವಲ್ಲ, ಸಾರ್ಥಕ ಬದುಕಿನ ಹೊಸ ಅಧ್ಯಾಯ: ಅಂಡಗಿ

'ಅಂತರ್ಜ್ಯೋತಿ' ಕೃತಿ ಲೋಕಾರ್ಪಣೆ; ಆಧ್ಯಾತ್ಮಿಕ ಚಿಂತನೆ, ಸೇವಾಭಾವ ಮತ್ತು ಸತ್ಸಂಗದ ಮಹತ್ವಕ್ಕೆ ಒತ್ತು

ಕಲಬುರಗಿ, ಆ.2: ನಿವೃತ್ತಿ ಜೀವನವು ಸಾಧನೆಗೆ ಕೊನೆಯಲ್ಲ; ಬದಲಾಗಿ ಸಾರ್ಥಕ ಬದುಕಿಗೆ ಪೂರಕವಾಗುವ ಹೊಸ ಅಧ್ಯಾಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.

ನಗರದ ದೇವಿನಗರದ ಸಿದ್ದರೂಢ ಸತ್ಸಂಗ ಸಮಿತಿ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಗುರುನಾಥ ಭೀಮಳ್ಳಿ ವಿರಚಿತ ‘ಅಂತರ್ಜ್ಯೋತಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯ, ಆಧ್ಯಾತ್ಮಿಕ ಚಿಂತನೆ ಹಾಗೂ ಜ್ಞಾನ ಹಂಚುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಬಹುದು. ಈ ನಿಟ್ಟಿನಲ್ಲಿ ಗುರುನಾಥ ಭೀಮಳ್ಳಿ ಅವರು ನಿವೃತ್ತರ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.

ಆಧ್ಯಾತ್ಮಿಕ ಚಿಂತಕ ಬಿ. ಮಹೇಶ್ವರಿ ಅವರು ಕೃತಿಯನ್ನು ಪರಿಚಯಿಸಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಸರಮಾಲೆಯಾದ ಈ ಕೃತಿ ದೈನಂದಿನ ಜೀವನಕ್ಕೆ ಮಾರ್ಗದರ್ಶಿಯಾಗಿದ್ದು, ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಸರಳವಾಗಿ ವಿವರಿಸುತ್ತದೆ. ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಮೈಂದಗಿಯ ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದ್ದೇವರು ಆಶೀರ್ವಚನ ನೀಡಿ, ಸೇವೆಯೇ ಸ್ವರ್ಗದ ಸೋಪಾನ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಗ್ರಂಥಾಲಯ ಸ್ಥಾಪನೆ ಹಾಗೂ ಸಾಮಾಜಿಕ-ಧಾರ್ಮಿಕ ಸೇವೆಯಲ್ಲಿ ತೊಡಗಿರುವ ಗುರುನಾಥ ಭೀಮಳ್ಳಿ ಅವರ ಬದುಕು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಕೃತಿಕಾರ ಗುರುನಾಥ ಭೀಮಳ್ಳಿ ಅವರು ಮಾತನಾಡಿ, ಶ್ರೀ ಸಿದ್ದರೂಢರ ಪ್ರೇರಣೆಯಿಂದ ಸತ್ಸಂಗಗಳಲ್ಲಿ ಪಡೆದ ಅನುಭವಗಳನ್ನೇ ಈ ಕೃತಿಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು. ಕೃತಿ ಪ್ರಕಟಣೆಗೆ ಸಹಕರಿಸಿದ ಡಾ. ಕಾವ್ಯಶ್ರೀ ಮಹಾಗಾಂವಕರ, ಡಾ. ಶರಣಬಸಪ್ಪ ವಡ್ಡನಕೇರಿ, ಶರತ್‌ಚಂದ್ರ ಪೊಲೀಸ್ ಪಾಟೀಲ ಹಾಗೂ ಸತ್ಸಂಗದ ಗೆಳೆಯರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧೀನ ಕಾರ್ಯದರ್ಶಿ ಶಿವಪುತ್ರಪ್ಪ ಕಂಟ, ಶ್ರವಣಕುಮಾರ್ ಮುನ್ನೊಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಿರ್ಮಲಾ ಸಿರಗಾಪುರ ಸ್ವಾಗತಿಸಿದರು. ಕಾಶೀನಾಥ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿನೋದಕುಮಾರ್ ಜನೇವರಿ ವಂದಿಸಿದರು.

ಈ ಸಂದರ್ಭದಲ್ಲಿ ರೇವಣಸಿದ್ಧಪ್ಪ ಜೀವನಗಿ, ಗಣೇಶ್ ಚಿನ್ನಾಕರ, ನಾಗೇಂದ್ರಪ್ಪ ಬಂಟನಳ್ಳಿ, ಸಂಗಪ್ಪ ಭೀಮಳ್ಳಿ, ಗುರುನಾಥ ವಿಠ್ಠಪ್ಪ, ಶರಣಬಸಪ್ಪ ಭೀಮಳ್ಳಿ, ಮಲ್ಲಿಕಾರ್ಜುನ ಆಳಂದ, ಚಂದ್ರಶೇಖರ ಭೀಮಳ್ಳಿ, ಚಂದ್ರಮೋಹನ ಭೀಮಳ್ಳಿ, ವಿಜಯಕುಮಾರ್ ಭಾಲ್ಕಿ, ಶಿವಶರಣ ಭೀಮಳ್ಳಿ, ಶ್ರೀಮತಿ ಮಲ್ಲಮ್ಮ, ಶ್ರೀಮತಿ ರೇಣುಕಾದೇವಿ ಸೇರಿದಂತೆ ಸತ್ಸಂಗ ಸಮಿತಿಯ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button