ಶ್ರೀಮದ್ ಜಯತೀರ್ಥರ ಪೂರ್ವಾರಾಧನೆ ವೈಭವ; ಜ್ಞಾನ-ವೈರಾಗ್ಯದ ಆದರ್ಶ ಇಂದಿಗೂ ಪ್ರಸ್ತುತ
ಜಯತೀರ್ಥರ ಜೀವನ, ಕೃತಿಗಳು ಮತ್ತು ದ್ವೈತ ತತ್ವದ ಸಂದೇಶದ ಕುರಿತು ವಿಶೇಷ ಪ್ರವಚನ; ಭಕ್ತಿಭಾವದಿಂದ ಗುರುಸ್ಮರಣೆ

ಕಲಬುರಗಿ, ಆ.2: ನಗರದ ಕರುಣೇಶ್ವರ ನಗರದ ಶ್ರೀ ಜೈವೀರ ಹನುಮಾನ್ ದೇವಸ್ಥಾನದಲ್ಲಿ ಶ್ರೀಮದ್ ಜಯತೀರ್ಥರ ಪೂರ್ವಾರಾಧನೆ ಅಂಗವಾಗಿ ವಿಶೇಷ ಪಾರಾಯಣ, ಧಾರ್ಮಿಕ ಸಭೆ ಹಾಗೂ ಭಕ್ತಿ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಪಂಡಿತ್ ಶ್ರೀನಿವಾಸಾಚಾರ್ಯ ಪಡಕಿ ಅವರು ವಿಶೇಷ ಪ್ರವಚನ ನೀಡಿ, ಶ್ರೀಮದ್ ಜಯತೀರ್ಥರ ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ಹೇಳಿದರು. ದ್ವೈತ ಸಿದ್ಧಾಂತವನ್ನು ಸುಲಭವಾಗಿ, ತಾರ್ಕಿಕವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸಿದ ಮಹಾನ್ ತತ್ವಜ್ಞಾನಿಯಾಗಿದ್ದ ಅವರು, ತಮ್ಮ ಅಮೂಲ್ಯ ಗ್ರಂಥಗಳ ಮೂಲಕ ಭಾರತೀಯ ತತ್ವಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.
ಶ್ರೀಮದ್ ಜಯತೀರ್ಥರ ಪೂರ್ವಾಶ್ರಮದ ಜೀವನ, ರಾಜಕುಮಾರನಾಗಿ ಜನಿಸಿದ ಸಂದರ್ಭ, ಶ್ರೀ ಅಕ್ಷೋಭ್ಯ ತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ ಘಟನೆ ಹಾಗೂ ದ್ವೈತ ಸಿದ್ಧಾಂತದ ಪ್ರಚಾರಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ ವಿಷಯಗಳನ್ನು ಅವರು ವಿವರಿಸಿದರು.
ಯರಗೋಳದ ಶಂಖಾಕಾರದ ಗುಹೆಯಲ್ಲಿ ತಪಸ್ಸು ಆಚರಿಸಿದ ಶ್ರೀಮದ್ ಜಯತೀರ್ಥರು, ಶ್ರೀಮದ್ ಮಧ್ವಾಚಾರ್ಯರ ಮೂಲಗ್ರಂಥಗಳಿಗೆ ಅಮೂಲ್ಯ ಟೀಕೆಗಳನ್ನು ರಚಿಸಿದರು. ವಿಶೇಷವಾಗಿ ‘ನ್ಯಾಯಸುಧಾ’ ಗ್ರಂಥವು ದ್ವೈತ ವೇದಾಂತದ ಅತ್ಯುನ್ನತ ವ್ಯಾಖ್ಯಾನ ಗ್ರಂಥವಾಗಿ ಇಂದಿಗೂ ಪಂಡಿತರಿಂದ ಅಧ್ಯಯನಕ್ಕೆ ಒಳಪಟ್ಟಿದೆ ಎಂದು ಹೇಳಿದರು.
ವಿಜಯನಗರ ಸಾಮ್ರಾಜ್ಯದ ರಾಜಗುರು ಶ್ರೀ ವಿದ್ಯಾರಣ್ಯರೂ ಸಹ ಜಯತೀರ್ಥರ ಪಾಂಡಿತ್ಯವನ್ನು ಮೆಚ್ಚಿ ಅವರ ಗ್ರಂಥಗಳಿಗೆ ಗೌರವ ಸಲ್ಲಿಸಿದ ಪ್ರಸಂಗವನ್ನು ಉಲ್ಲೇಖಿಸಿದ ಅವರು, ಜ್ಞಾನ, ವೈರಾಗ್ಯ ಮತ್ತು ಗುರುಭಕ್ತಿಯ ಮೂಲಕ ಸಮಾಜಕ್ಕೆ ದಾರಿದೀಪವಾದ ಮಹನೀಯರು ಜಯತೀರ್ಥರು ಎಂದು ಬಣ್ಣಿಸಿದರು.
ಕೇವಲ 41 ವರ್ಷಗಳ ಅಲ್ಪಾಯುಷ್ಯದಲ್ಲಿಯೇ ಶ್ರೀಮದ್ ಜಯತೀರ್ಥರು ದ್ವೈತ ವೇದಾಂತಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಗ್ರಂಥಗಳು ಇಂದಿಗೂ ವೇದಾಂತ ಅಧ್ಯಯನಕ್ಕೆ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಜೈವೀರ ಹನುಮಂತನಿಗೆ ಹಾಗೂ ಶ್ರೀಮದ್ ಜಯತೀರ್ಥರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರು ಸಾಮೂಹಿಕವಾಗಿ “ಶ್ರೀ ಜಯತೀರ್ಥ ಗುರುಭ್ಯೋ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸಿ ಗುರುಸ್ಮರಣೆ ಸಲ್ಲಿಸಿದರು.
ಭಜನಾ ಮಂಡಳಿಯ ಸದಸ್ಯರು ಶ್ರೀಮದ್ ಜಯತೀರ್ಥರ ಮಹಿಮೆ, ತತ್ವಜ್ಞಾನ ಹಾಗೂ ಗುರುಭಕ್ತಿಯನ್ನು ಸಾರುವ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತಿಮಯ ವಾತಾವರಣ ನಿರ್ಮಿಸಿದರು.
ಪಾರಾಯಣ ಸಂಘದ ವಿನುತ್ ಜೋಶಿ ಮಾತನಾಡಿ, ಶ್ರೀಪಾದಂಗಳವರ ಆದೇಶದಂತೆ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾರಾಯಣ, ಪ್ರವಚನ ಹಾಗೂ ಜ್ಞಾನಪ್ರಸಾರ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಡಾ. ಶ್ರೀನಿವಾಸ್ ಜಾಹಗೀರದಾರ, ಸುನೀಲ್ ಕುಲಕರ್ಣಿ, ಲಕ್ಷ್ಮೀಕಾಂತ ರಾವ್ ಕುಲಕರ್ಣಿ, ವಿನೋದ್ ಸಾಥಖೇಡ, ಕೆ.ಬಿ. ಕುಲಕರ್ಣಿ, ಸಮೀರ್ ಕುಲಕರ್ಣಿ, ಗಿರೀಶ್ ಕುಲಕರ್ಣಿ, ವಿಶ್ವಾಸ್ ಮೊಘೇಕರ್ ಸೇರಿದಂತೆ ಅನೇಕ ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿ, ಪಾರಾಯಣ ಸಂಘದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.



