ರಾಜಕೀಯ

ಧರ್ಮಸಿಂಗ್ ಅವರ ಆದರ್ಶ ರಾಜಕೀಯ ಇಂದಿಗೂ ಮಾದರಿ: ಶಾಸಕ ಅಲ್ಲಮಪ್ರಭು ಪಾಟೀಲ್

ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ 9ನೇ ಪುಣ್ಯಸ್ಮರಣೆಯಲ್ಲಿ ಪುಷ್ಪನಮನ; ಅವರ ಸರಳತೆ, ಪ್ರಾಮಾಣಿಕತೆ ಮತ್ತು ಜನಸೇವೆಯನ್ನು ಸ್ಮರಿಸಿದ ಗಣ್ಯರು

ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ 9ನೇ ಪುಣ್ಯಸ್ಮರಣೆಯನ್ನು ಮಂಗಳವಾರ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸಿಂಗ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಧರ್ಮಸಿಂಗ್ ಅವರು ತಮ್ಮ ಸಂಪೂರ್ಣ ರಾಜಕೀಯ ಜೀವನವನ್ನು ಜನಸೇವೆಗೆ ಮೀಸಲಿಟ್ಟ ಅಪರೂಪದ ನಾಯಕರಾಗಿದ್ದರು ಎಂದು ಸ್ಮರಿಸಿದರು.

ಧರ್ಮಸಿಂಗ್ ಅವರ ಪ್ರಾಮಾಣಿಕತೆ, ಸರಳತೆ ಹಾಗೂ ನಿಸ್ವಾರ್ಥ ಸೇವೆಯ ಮಾರ್ಗ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, ಅವರ ಆದರ್ಶಗಳು ಸದಾ ಸ್ಮರಣೀಯವಾಗಿವೆ ಎಂದು ಹೇಳಿದರು. ಸುಮಾರು ಐದು ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಮಹತ್ವದ ಕೊಡುಗೆ ನೀಡಿದ ಅವರು, ಸ್ಥಳೀಯ ವಿಧಾನಸಭಾ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೆ, ಬೀದರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಬಕಾರಿ, ಗೃಹ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಕಂದಾಯ ಸೇರಿದಂತೆ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿ ಜನಪರ ಆಡಳಿತಕ್ಕೆ ಹೆಸರಾಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಹಾಗೂ ಅವರ ಪತ್ನಿ ಶ್ರೀಮತಿ ಶ್ವೇತಾ ಅಜಯಸಿಂಗ್ ಧರ್ಮಸಿಂಗ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೊನ್ನದ ಶಿವಾನಂದ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಶಿವಲಾಲ್ ಸಿಂಗ್, ನೀಲಕಂಠರಾವ್ ಮೂಲಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ರಾಜಶೇಖರ ಸಾಹು ಸೀರಿ, ಗುರುಲಿಂಗಪ್ಪಗೌಡ ಮಾಳಿಪಾಟೀಲ್, ಕಾಶೀಂ ಪಟೇಲ್ ಮುದಬಾಳ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಷಣ್ಮುಖಪ್ರಗೌಡ ಹಿರೇಗೌಡ, ಬಹಾದ್ದೂರ್ ರಾಠೋಡ್, ರವಿಚಂದ್ರ ಗುತ್ತೇದಾರ್, ಸಕ್ರೆಪ್ಪಗೌಡ ಹರನೂರ, ಶಿವಕುಮಾರ ಕಲ್ಲಾ, ನೀಲಕಂಠ ಅವಂಟ, ಅಶೋಕ ಲಕ್ಕತ್ತಿ, ಬೈಲಪ್ಪ ನೇದಲಗಿ, ಗುರು ಪಾಟೀಲ್, ಗುರುಲಿಂಗಯ್ಯಸ್ವಾಮಿ ಯನಗುಂಟ, ಮಹಿಮೂದ್ ನೂರಿ, ಏಜಾಜ್ ನವಾಜ್, ರಫೀಕ್ ಮಡಕಿ, ಜೈ ಕರ್ನಾಟಕ ತಾಲೂಕು ಅಧ್ಯಕ್ಷ ಶರಬು ಕಲ್ಯಾಣಿ, ಬಾಪುಗೌಡ ಕಲ್ಲಹಂಗರಗಿ, ಪ್ರಗತಿಪರ ಚಿಂತಕ ಭಗವಂತರಾಯ ಬೆಣ್ಣೂರು ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಯಪ್ಪ ಬೇಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button