ಮಳೆಗಾಗಿ ವರುಣನ ಮೊರೆ: ಡೋಂಗರಗಿಯಲ್ಲಿ ಅಖಂಡ ಶಿವನಾಮ ಸಪ್ತಾಹ, ಗಂಗಾದೇವಿಗೆ ವಿಶೇಷ ಪೂಜೆ
ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರು; ಉತ್ತಮ ಮಳೆಯಾಗಲೆಂದು ಗ್ರಾಮಸ್ಥರಿಂದ ವಿಶೇಷ ಧಾರ್ಮಿಕ ಆಚರಣೆ

ಮುಂಗಾರು ಆರಂಭವಾಗಿ ಸಾಕಷ್ಟು ದಿನಗಳು ಕಳೆದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಡೋಂಗರಗಿ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಉತ್ತಮ ಮಳೆಯಾಗಲೆಂದು ವರುಣ ದೇವನ ಮೊರೆ ಹೋಗಿ ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸಿದರು.
ಮಳೆಯ ಕೊರತೆಯಿಂದ ಹೊಲಗಳಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ಅಖಂಡ ಶಿವನಾಮ ಸಪ್ತಾಹವನ್ನು ಆಯೋಜಿಸಿ ನಿರಂತರ ಶಿವನಾಮ ಸ್ಮರಣೆ, ಭಜನೆ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಸಪ್ತಾಹದಲ್ಲಿ ಗ್ರಾಮದ ಮಹಿಳೆಯರು, ಪುರುಷರು ಹಾಗೂ ಯುವಕರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಸಪ್ತಾಹದ ಸಮಾರೋಪ ಅಂಗವಾಗಿ ಭಾನುವಾರ ಗ್ರಾಮದ ಹನುಮಾನ ದೇವಸ್ಥಾನದಿಂದ ಮಾಂಜ್ರಾ ನದಿವರೆಗೆ ವಿಶೇಷ ಧಾರ್ಮಿಕ ಮೆರವಣಿಗೆ ನಡೆಯಿತು. ಸುಮಾರು ಎರಡು ಕಿಲೋಮೀಟರ್ ದೂರ ಭಜನೆ ಮಾಡುತ್ತಾ ಕಾಲ್ನಡಿಗೆಯಲ್ಲಿ ತೆರಳಿದ ಭಕ್ತರು ಗಂಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನದಿಯ ನೀರನ್ನು ಕೊಡಗಳಲ್ಲಿ ತುಂಬಿಕೊಂಡು ಗ್ರಾಮಕ್ಕೆ ತಂದು ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಜಲಾಭಿಷೇಕ ನೆರವೇರಿಸಿದರು. ಈ ಮೂಲಕ ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ವರ್ಷ ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನು ನಂಬಿಕೊಂಡು ರೈತರು ಸಾಲ ಮಾಡಿ ಬೀಜ ಹಾಗೂ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ನಂತರ ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿದ್ದು, ರೈತರ ಆತಂಕ ಹೆಚ್ಚಾಗಿದೆ. ಕೆಲವರು ಬೋರ್‌ವೆಲ್ ನೀರಿನ ಮೂಲಕ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಎಲ್ಲ ರೈತರಿಗೆ ಆ ಸೌಲಭ್ಯ ಲಭ್ಯವಾಗಿಲ್ಲ. ಹೀಗಾಗಿ ಪ್ರಕೃತಿಯ ಕೃಪೆಗಾಗಿ ಗ್ರಾಮಸ್ಥರು ಧಾರ್ಮಿಕ ಆಚರಣೆಗಳನ್ನು ನಡೆಸಿ ಮಳೆಯ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಅಖಂಡ ಶಿವನಾಮ ಸಪ್ತಾಹದ ವೇಳೆ ಗ್ರಾಮದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ಶಿವನಾಮದ ಘೋಷ ಮೊಳಗಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಅನಿಲಕುಮಾರ ಬಿರಾದಾರ, ಧನರಾಜ ಸುಂಕನಾಳೆ, ಸಂಗಮೇಶ ಬಿರಾದಾರ, ಮಾಂತೇಶ, ನಾಗನಾಥ, ಮಲ್ಲಿಕಾರ್ಜುನ, ಹಾವಪ್ಪ, ಚಂದ್ರಕಾಂತ, ದೇವಿದಾಸ್, ಧನಯ್ಯ, ಬಾಬುರಾವ್, ಶಿವರಾಜ್, ರಾಜಕುಮಾರ್, ಗಂಗಾಶೆಟ್ಟಿ, ಬಸವರಾಜ್, ಸುಗಮ್ಮ, ಸುಶೀಲಮ್ಮ, ಕಲಾವತಿ, ಸಂಗೀತಾ, ಪೂಜಾ, ಕಮಲಮ್ಮ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.



