ಜಿಲ್ಲಾಸುದ್ದಿ

ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯ ಪಾಲನೆಗೆ ಒತ್ತಾಯ

ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಹಾರ ನಿರೀಕ್ಷಣಾಧಿಕಾರಿಗಳಿಗೆ ಮನವಿ; ನಿಯಮ ಉಲ್ಲಂಘಿಸಿದರೆ ಹೋರಾಟದ ಎಚ್ಚರಿಕೆ

ಜೇವರ್ಗಿ, ಜು.28: ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳು ಸರ್ಕಾರ ನಿಗದಿಪಡಿಸಿರುವ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಗ್ರಹಿಸಿ ವೀರ ಕನ್ನಡಿಗರ ಸೇನೆ ತಾಲೂಕು ಅಧ್ಯಕ್ಷ ಪರಮೇಶ್ವರ್ ನಾಯಕ್ ಬಿರಾಳ್ ಅವರು ಆಹಾರ ನಿರೀಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರ ಹೊರಡಿಸಿರುವ ಆದೇಶದಂತೆ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ಕೃಷಿ ಮತ್ತು ದೈನಂದಿನ ಕೆಲಸಗಳಿಗೆ ತೆರಳುವ ಮೊದಲು ಅಥವಾ ಕೆಲಸ ಮುಗಿಸಿ ಬಂದ ಬಳಿಕವೂ ರೇಷನ್ ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ನಗರ ಪ್ರದೇಶದ ಸಾರ್ವಜನಿಕರಿಗೂ ಈ ಸಮಯ ವ್ಯವಸ್ಥೆ ಅನುಕೂಲಕರವಾಗಿದ್ದು, ಉದ್ಯೋಗದ ಕಾರಣದಿಂದ ಹಗಲಿನ ವೇಳೆ ರೇಷನ್ ಪಡೆಯಲು ಸಾಧ್ಯವಾಗದವರಿಗೆ ರಾತ್ರಿ ಸಮಯದಲ್ಲಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಯ ಪಾಲನೆ ಮಾಡದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ನಿಯಮ ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಸಂಬಂಧಿತ ನ್ಯಾಯಬೆಲೆ ಅಂಗಡಿಗಳ ಎದುರು ಗ್ರಾಹಕರೊಂದಿಗೆ ಸೇರಿ ವೀರ ಕನ್ನಡಿಗರ ಸೇನೆಯ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಪರಮೇಶ್ವರ್ ನಾಯಕ್ ಬಿರಾಳ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವೀರ ಕನ್ನಡಿಗರ ಸೇನೆಯ ತಾಲೂಕು ಕಾರ್ಯಾಧ್ಯಕ್ಷ ಸಿದ್ದಣ್ಣಗೌಡ ಮಾವನೂರು, ಉಪಾಧ್ಯಕ್ಷ ವೆಂಕಟೇಶ್ ಪಟ್ಟೇದಾರ, ನಗರ ಘಟಕ ಗೌರವಾಧ್ಯಕ್ಷ ಗಾಲಿಬ್ ಗಾಯಕವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button