ಬ್ರಿಟನ್‌ನ ಎರಡೂ ರಾಯಲ್ ಕಾಲೇಜುಗಳಿಂದ ಎಫ್‌ಡಿಎಸ್ ಫೆಲೋಶಿಪ್: ಕಲಬುರಗಿಯ ಡಾ. ಗುರುರಾಜ್ ಅರಕೇರಿ ಅಪರೂಪದ ಸಾಧನೆ
ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜಿನಿಂದ ಮತ್ತೊಂದು ಎಫ್‌ಡಿಎಸ್ ಗೌರವ; ಕಲ್ಯಾಣ ಕರ್ನಾಟಕದ ಮೊದಲ ದಂತ ಶಸ್ತ್ರಚಿಕಿತ್ಸಕರಿಗೆ ಐತಿಹಾಸಿಕ ಮನ್ನಣೆ

ಕಲಬುರಗಿ, ಜು.27: ನಗರದ ಖ್ಯಾತ ಮುಖ, ದವಡೆ ಹಾಗೂ ದಂತ ಶಸ್ತ್ರಚಿಕಿತ್ಸಕ ಪ್ರೊ. (ಡಾ.) ಗುರುರಾಜ್ ಅರಕೇರಿ ಅವರಿಗೆ ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ ಸಂಸ್ಥೆಯು ಪ್ರತಿಷ್ಠಿತ ಫೆಲೋಶಿಪ್ ಇನ್ ಡೆಂಟಲ್ ಸರ್ಜರಿ (ಎಫ್‌ಡಿಎಸ್) ಗೌರವವನ್ನು ಪ್ರದಾನ ಮಾಡಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವತಿಯಿಂದ ಎಫ್‌ಡಿಎಸ್ ಫೆಲೋಶಿಪ್ ಪಡೆದಿದ್ದ ಡಾ. ಅರಕೇರಿ ಅವರು, ಇದೀಗ ಗ್ಲಾಸ್ಗೋ ರಾಯಲ್ ಕಾಲೇಜಿನಿಂದಲೂ ಇದೇ ಗೌರವಕ್ಕೆ ಪಾತ್ರರಾಗಿದ್ದಾರೆ. ಇದರೊಂದಿಗೆ ಬ್ರಿಟನ್‌ನ ಎರಡೂ ರಾಯಲ್ ಕಾಲೇಜುಗಳಿಂದ ಎಫ್‌ಡಿಎಸ್ ಫೆಲೋಶಿಪ್ ಪಡೆದ ಕಲ್ಯಾಣ ಕರ್ನಾಟಕ ಭಾಗದ ಮೊದಲ ದಂತ ಶಸ್ತ್ರಚಿಕಿತ್ಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಾ. ಅರಕೇರಿ ಅವರ ವೈಜ್ಞಾನಿಕ ಸಂಶೋಧನೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಈ ಫೆಲೋಶಿಪ್ ನೀಡಲಾಗಿದೆ. ವಿಶೇಷವಾಗಿ ಗುಟ್ಕಾ ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ಬಾಯಿ ಕ್ಯಾನ್ಸರ್ ಪೂರ್ವ ಹಂತದ ಕಾಯಿಲೆಯಾದ ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್ ಕುರಿತು ಅವರು ಕಳೆದ ಎರಡು ದಶಕಗಳಿಂದ ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ.
ನೆದರ್‌ಲ್ಯಾಂಡ್ಸ್‌ನ ರಾಡ್‌ಬೌಡ್ ವಿಶ್ವವಿದ್ಯಾಲಯದಲ್ಲಿ ಅವರು ನಡೆಸಿದ ಪಿಎಚ್‌ಡಿ ಸಂಶೋಧನೆಯು ಈ ಕಾಯಿಲೆಯ ಬೆಳವಣಿಗೆಯ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದು, ಕುಡಿಯುವ ನೀರಿನಲ್ಲಿರುವ ಸೂಕ್ಷ್ಮ ಅಂಶಗಳ ಪಾತ್ರವನ್ನು ಗುರುತಿಸಿದೆ. ಈ ಸಂಶೋಧನೆ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಅಗತ್ಯತೆಯ ಕುರಿತು ಹೊಸ ಅರಿವು ಮೂಡಿಸಿದೆ. ಇತ್ತೀಚೆಗೆ ತಂಬಾಕಿನಲ್ಲಿರುವ ಫ್ಲೋರೈಡ್ ಅಂಶಗಳ ಪರಿಣಾಮದ ಕುರಿತ ಅವರ ಅಧ್ಯಯನವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಪ್ರಸ್ತುತ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿರುವ ಡಾ. ಅರಕೇರಿ ಅವರು ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸಂಶೋಧನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬ್ರಿಟನ್‌ನ ಹೊರಗಿನ ಸಂಶೋಧಕರಿಗೆ ಅಪರೂಪವಾಗಿ ನೀಡಲಾಗುವ ಪಾಲ್ ಟಾಲರ್ ರಿಸರ್ಚ್ ಪ್ರಶಸ್ತಿ ಸೇರಿದಂತೆ ಹಲವು ಬಿಎಒಎಂಎಸ್ ಅನುದಾನಗಳಿಗೂ ಅವರು ಭಾಜನರಾಗಿದ್ದಾರೆ.
ಈ ಗೌರವದ ಕುರಿತು ಪ್ರತಿಕ್ರಿಯಿಸಿದ ಡಾ. ಗುರುರಾಜ್ ಅರಕೇರಿ, ಗ್ಲಾಸ್ಗೋ ರಾಯಲ್ ಕಾಲೇಜಿನಿಂದ ದೊರೆತ ಎರಡನೇ ಎಫ್‌ಡಿಎಸ್ ಫೆಲೋಶಿಪ್ ತಮ್ಮ ವೃತ್ತಿಜೀವನದ ಮಹತ್ವದ ಗೌರವವಾಗಿದೆ ಎಂದು ಹೇಳಿದರು. ಗ್ರಾಮೀಣ ಹಿನ್ನೆಲೆಯಿಂದಲೂ ಜಾಗತಿಕ ಮಟ್ಟದ ವೈದ್ಯಕೀಯ ಸಂಶೋಧನೆ ನಡೆಸಬಹುದು ಎಂಬುದನ್ನು ಈ ಸಾಧನೆ ತೋರಿಸಿದೆ. ಈ ಗೌರವವನ್ನು ಬಾಯಿ ಕ್ಯಾನ್ಸರ್ ಪೂರ್ವ ಹಂತದ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ ಸಮರ್ಪಿಸುತ್ತೇನೆ. ಕಲ್ಯಾಣ ಕರ್ನಾಟಕವನ್ನು ಬಾಯಿ ಕ್ಯಾನ್ಸರ್ ಮುಕ್ತ ಪ್ರದೇಶವನ್ನಾಗಿಸುವ ನಿಟ್ಟಿನಲ್ಲಿ ತಮ್ಮ ಸಂಶೋಧನೆ ಹಾಗೂ ಸೇವೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.



