ಬೈಕ್ ಡಿಕ್ಕಿ ಒಡೆದು ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಎಸ್‌ಬಿಐ ಬ್ಯಾಂಕ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನದಿಂದ ಚಿನ್ನಾಭರಣ ಹಾಗೂ ನಗದು ದೋಚಿದ ಕಳ್ಳರು

ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸಮೀಪದ ಎಸ್‌ಬಿಐ ಬ್ಯಾಂಕ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಡಿಕ್ಕಿ ಒಡೆದು ಸುಮಾರು ₹6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ನಡೆದಿದೆ.
ನ್ಯೂ ರಾಘವೇಂದ್ರ ನಗರದ ನಿವಾಸಿ ಅನ್ನಪೂರ್ಣಾ ಸಂತೋಷ ಕುಲಕರ್ಣಿ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಜುಲೈ 7ರಂದು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ರಾಘವೇಂದ್ರ ನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಲಾಕರ್‌ನಿಂದ ಸುಮಾರು ₹6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10,000 ನಗದು ತೆಗೆದುಕೊಂಡು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದರು.
ನಂತರ ಬೆಳಿಗ್ಗೆ ಸುಮಾರು 11 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸಮೀಪದ ಎಸ್‌ಬಿಐ ಬ್ಯಾಂಕ್ ಎದುರು ವಾಹನ ನಿಲ್ಲಿಸಿ ಬ್ಯಾಂಕ್ ಕೆಲಸಕ್ಕಾಗಿ ಒಳಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಮರಳಿ ಬಂದಾಗ ಬೈಕ್‌ನ ಡಿಕ್ಕಿ ಒಡೆದಿರುವುದು ಕಂಡುಬಂದಿದ್ದು, ಪರಿಶೀಲಿಸಿದಾಗ ಚಿನ್ನಾಭರಣ ಮತ್ತು ನಗದು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಕಳುವಾದ ವಸ್ತುಗಳಲ್ಲಿ ಚಿನ್ನದ ಚಪ್ಪರ, ಉಂಗುರಗಳು, ಕಿವಿಯೋಲೆಗಳು ಸೇರಿದಂತೆ ವಿವಿಧ ಆಭರಣಗಳು ಹಾಗೂ ₹10,000 ನಗದು ಸೇರಿವೆ.
ಘಟನೆ ಕುರಿತು ರಾಘವೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



