ಅಪರಾಧ

ಮಣಿಕಾಂತ ರಾಠೋಡ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

ಆಡಿಯೊ ಸಂದೇಶದ ಆಧಾರದಲ್ಲಿ ದೂರು; ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭ

ಬಿಜೆಪಿ ಮುಖಂಡ ಮಣಿಕಾಂತ ರಾಠೋಡ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್‌ಆರ್‌ಟಿಸಿ ಕಾಲೋನಿಯ ಹೀರಾಪುರ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಿದ್ಧಾರೂಢ ಮಚೇಂದ್ರ ಕಾಂಬಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಸಿದ್ಧಾರೂಢ ಅವರು ತಮ್ಮ ಸ್ನೇಹಿತರೊಂದಿಗೆ ಕಲಬುರಗಿ ವಿಶ್ವವಿದ್ಯಾಲಯ ಆವರಣದಲ್ಲಿ ಇದ್ದ ವೇಳೆ ಅವರ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಆಡಿಯೊ ಸಂದೇಶವೊಂದು ಬಂದಿತ್ತು. ಆ ಸಂದೇಶವನ್ನು ಆಲಿಸಿದಾಗ ಅದರಲ್ಲಿ ಮಣಿಕಾಂತ ರಾಠೋಡ್ ಅವರ ಧ್ವನಿಯಿದ್ದು, ನಿರ್ದಿಷ್ಟ ಸಮುದಾಯದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಲಾಗಿದೆ ಎಂದು ಆರೋಪಿಸಲಾಗಿದೆ.

ಆಡಿಯೊದಲ್ಲಿನ ಮಾತುಗಳ ಅರ್ಥ ತಿಳಿದುಕೊಳ್ಳಲು ಮತ್ತೊಬ್ಬ ವ್ಯಕ್ತಿಯಿಂದ ಭಾಷಾಂತರ ಮಾಡಿಸಿಕೊಂಡಿದ್ದು, ನಂತರ ಆಡಿಯೊದಲ್ಲಿ ಜಾತಿ ನಿಂದನೆ ಹಾಗೂ ಸಮುದಾಯಗಳ ನಡುವೆ ವೈಷಮ್ಯ ಉಂಟುಮಾಡುವ ಹೇಳಿಕೆಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಗಳಿಂದ ತಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಹಾಗೂ ಸಮಾಜದಲ್ಲಿ ವೈಮನಸ್ಸು ಸೃಷ್ಟಿಸುವ ಉದ್ದೇಶದಿಂದ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.

ಈ ಸಂಬಂಧ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button