ಸಾಂಸ್ಕೃತಿಕ

ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಾಚಯ್ಯಸ್ವಾಮಿ, ಸುಭದ್ರಾದೇವಿ ಆಯ್ಕೆ

ಜುಲೈ 19ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ; ರಂಗಭೂಮಿಗೆ ನೀಡಿದ ಅಪೂರ್ವ ಸೇವೆಗೆ ಗೌರವ

ಕಲಬುರಗಿ, ಜು.14: ಈ ವರ್ಷದ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಹಿರಿಯ ರಂಗಕಲಾವಿದ ರಾಚಯ್ಯಸ್ವಾಮಿ ಹಿರೇಮಠ ಹಾಗೂ ರಂಗಭೂಮಿ ಕಲಾವಿದೆ, ನಿರ್ದೇಶಕಿ ಶ್ರೀಮತಿ ಸುಭದ್ರಾದೇವಿ (ವೀಣಾ ಶರ್ಮಾ) ಅವರನ್ನು ಆಯ್ಕೆ ಮಾಡಲಾಗಿದೆ. ಜುಲೈ 19ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಸಭೆಯಲ್ಲಿ ಹಿರಿಯ ರಂಗಕರ್ಮಿಗಳು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ, ವಿಮರ್ಶಕ ಹಾಗೂ ಚಿಂತಕ ರಹಮತ್ ತರೀಕೆರೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರಾಜಶೇಖರ್ ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ರಾಚಯ್ಯಸ್ವಾಮಿ ಹಿರೇಮಠ ಅವರು ಬಾಲ್ಯದಿಂದಲೇ ಸಂಗೀತ ಮತ್ತು ರಂಗಭೂಮಿಯತ್ತ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದು, 1970ರ ದಶಕದಿಂದಲೇ ನಾಟಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸಿ, ಹಾಸ್ಯ ಕಲಾವಿದರಾಗಿ ಹಾಗೂ ರಂಗಸೇವಕರಾಗಿ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ವೀಣಾ ಶರ್ಮಾ ಅವರು ದೇಶದ ಪ್ರಮುಖ ರಂಗ ನಿರ್ದೇಶಕಿ, ನಟಿ ಹಾಗೂ ರಂಗಶಿಕ್ಷಕಿಯಾಗಿದ್ದು, ಅಭಿನಯ, ನಿರ್ದೇಶನ, ರಂಗ ವಿನ್ಯಾಸ ಮತ್ತು ತರಬೇತಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. 150ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ನೀಡಿರುವ ಅವರು, 100ಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೇಶ-ವಿದೇಶಗಳಲ್ಲಿ 600ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದು, ಸಾವಿರಕ್ಕೂ ಹೆಚ್ಚು ಮಕ್ಕಳಿಗಾಗಿ ವಿಶೇಷ ನಾಟಕ ಪ್ರದರ್ಶನಗಳನ್ನು ಆಯೋಜಿಸಿ ರಂಗಭೂಮಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಈ ಪ್ರಶಸ್ತಿಯ ಮೂಲಕ ರಂಗಭೂಮಿಗೆ ಸಲ್ಲಿಸಿದ ಅವರ ದೀರ್ಘಕಾಲದ ಸೇವೆಯನ್ನು ಗೌರವಿಸಲಾಗುತ್ತಿದ್ದು, ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರಂಗಕರ್ಮಿಗಳು ಹಾಗೂ ಕಲಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

Related Articles

Leave a Reply

Your email address will not be published. Required fields are marked *

Back to top button