ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ: ಕಲಬುರಗಿಯಲ್ಲಿ ಜಾಗೃತಿ ಕಾರ್ಯಕ್ರಮ ನಾಳೆ
ಪ್ಲಾಸ್ಟಿಕ್ ಸರ್ಜರಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ; ಸೌಂದರ್ಯ ಚಿಕಿತ್ಸೆಗೆ ಮಾತ್ರ ಸೀಮಿತವಲ್ಲ ಎಂಬ ಸಂದೇಶ

ಕಲಬುರಗಿ, ಜು.14: ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ನಗರದ ಸೇಡಂ ರಸ್ತೆಯಲ್ಲಿರುವ ಸಾಯುಗ್ ಆಸ್ಪತ್ರೆ ವತಿಯಿಂದ ಜುಲೈ 15ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ. ಅಮರೇಶ್ ಬಿರಾದಾರ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಐತಿಹಾಸಿಕ ಹಿನ್ನೆಲೆ ಇದ್ದು, ಪ್ರಾಚೀನ ವೈದ್ಯ ಸುಶ್ರುತ ಅವರನ್ನು ವಿಶ್ವದ ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ಎಂದು ಗೌರವಿಸಲಾಗುತ್ತದೆ. ಆದರೂ ಇಂದಿಗೂ ಬಹುತೇಕ ಜನರು ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಸೌಂದರ್ಯವರ್ಧಕ ಚಿಕಿತ್ಸೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಹೇಳಿದರು.
ಪ್ಲಾಸ್ಟಿಕ್ ಸರ್ಜರಿ ಕೇವಲ ಸೌಂದರ್ಯ ಹೆಚ್ಚಿಸುವ ಚಿಕಿತ್ಸೆಯಲ್ಲ; ಅಪಘಾತಗಳು, ಜನ್ಮಜಾತ ದೋಷಗಳು, ಸುಟ್ಟ ಗಾಯಗಳು ಹಾಗೂ ದೇಹದ ವಿವಿಧ ಅಂಗಗಳ ಪುನರ್‌ನಿರ್ಮಾಣ, ಕಾರ್ಯಕ್ಷಮತೆ ಮರುಸ್ಥಾಪನೆ ಮತ್ತು ಜೀವನದ ಗುಣಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ಅಬಕಾರಿ ಉಪ ಆಯುಕ್ತ ಡಾ. ಪಿ. ಸಂಗಣ್ಣ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪ್ಲಾಸ್ಟಿಕ್ ಸರ್ಜರಿಯ ಮಹತ್ವ ಮತ್ತು ಅಗತ್ಯತೆ ಕುರಿತು ಜಾಗೃತಿ ಉಪನ್ಯಾಸ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಶಸ್ತ್ರಚಿಕಿತ್ಸಕ ಡಾ. ವಿ.ಬಿ. ಬಿರಾದಾರ್, ಡಯಾಬಿಟಾಲಜಿಸ್ಟ್ ಡಾ. ಶ್ವೇತಾ ಬಿರಾದಾರ್, ಮೂಳೆ ತಜ್ಞ ಡಾ. ರಾಯ್ ರಾಮ್, ಶಸ್ತ್ರಚಿಕಿತ್ಸಕ ಡಾ. ಸಂಗಮೇಶ್ ತೊಂಡಾರೆ ಸೇರಿದಂತೆ ಹಲವು ತಜ್ಞ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.



