ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಕ್ರಮ: ತನಿಖಾ ವರದಿ ಬಹಿರಂಗಕ್ಕೆ ಸೈಬಣ್ಣಾ ಜಮಾದಾರ್ ಆಗ್ರಹ

ಕಲಬುರ್ಗಿ, ಜು.೩- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಕ್ರಮ ಕುರಿತ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಿ ತಪ್ಪಿತಸ್ಥರಿಗೆ ಜೈಲಿಗೆ ಹಾಕಬೇಕು ಎಂದು ಅಹಿಂದ್ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷ ಸೈಬಣ್ಣಾ ಜಮಾದಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದಂತೆ ಕಾರ್ಯದರ್ಶಿಯನ್ನ ಕೂಡಲೇ ಕೈಬಿಟ್ಟು ಅನರ್ಹ ಕಾರ್ಯದರ್ಶಿಯ ಎಲ್ಲ ಆದೇಶಗಳನ್ನು ರದ್ದುಪಡಿಸಬೇಕು. ಹಾಗೂ ಮಂಡಳಿಗೆ ಸಂಬoಧಿಸಿದoತೆ, ಮಾನ್ಯ ಸಚಿವರು ಯೋಜನೆ ಕಾರ್ಯಕ್ರಮ ಸಂಯೋಜನೆ ನಡೆಸಲಾದ ಸಭೆ ನಡುವಳಿ (೨೫ರ ಜೂನ್ ೧೩) ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯನ್ನು ನಿವಾರಿಸಿ ಸಮಗ್ರ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದು, ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡುತ್ತಿದೆ. ಮಂಡಳಿಯ ಮೂಲ ಉದ್ದೇಶವು ಪ್ರದೇಶದ ಜನರ ಜೀವನಮಟ್ಟವನ್ನು ಸುಧಾರಿಸುವುದು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಮಾನ ಅಭಿವೃದ್ಧಿಯನ್ನು ಖಚಿತಪಡಿಸುವುದಾಗಿದೆ. ಆದರೆ, ಮಂಡಳಿಗೆ ನಿಯೋಜನೆಗೊಂಡಿರುವ ಕೆಲವು ಅನರ್ಹ ಹಾಗೂ ಜವಾಬ್ದಾರಿರಹಿತ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ನಿಯಮಗಳು, ಆದೇಶಗಳು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ದೂರಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ, ಅವ್ಯವಹಾರ, ಸ್ವಜನಪಕ್ಷಪಾತ. ಹಣದ ದುರುಪಯೋಗ ಮತ್ತು ಮನಬಂದAತೆ ಆಡಳಿತ ನಡೆಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಇದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಮೂಲ ಗುರಿ ಮತ್ತು ಉದ್ದೇಶಗಳೇ ಹಾಳಾಗುವಂತಾಗಿದೆ. ಉಚ್ಚನ್ಯಾಯಾಲಯ ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿ (ಅರ್ಜಿ ಸಂ:೨೩೨೨೩/೨೦೨೫) ವಿಚಾರಣೆ ಮಾಡಿ ಕಳೆದ ಜೂನ್ ೨೪ರಂದು ಆದೇಶ ಹೊರಡಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ನ್ಯಾಯಾಲಯ ವಿಚಾರಣೆಯಲ್ಲಿ ಮಂಡಳಿಯ ಅಧ್ಯಕ್ಷರ ನೇಮಕಾತಿಗೆ ಸಂಬoಧಿಸಿದoತೆ ೨೦೨೦ರಲ್ಲಿ ತಿದ್ದುಪಡಿ ಮಾಡಿರುವುದಾಗಿ ನ್ಯಾಯಾಲಯಕ್ಕೆ ದಾಖಲಾತಿಗಳನ್ನು ಸರ್ಕಾರ ಪರ ವಕೀಲರು ಸಲ್ಲಿಸಿದರು. ಆದರೆ ಕಾರ್ಯದರ್ಶಿ ನೇಮಕಾತಿಯು ಅವೈಜ್ಞಾನಿಕವಾಗಿದ್ದು, ಸದರಿ ಕಾರ್ಯದರ್ಶಿಯನ್ನು ಕೈಬಿಟ್ಟು ಸರ್ಕಾರದ ಕಾರ್ಯದರ್ಶಿಗೆ ಸಮನಾಗಿರುವ ಅಧಿಕಾರಿಯನ್ನ ನೇಮಕ ಮಾಡುವಂತೆ ಆದೇಶಿಸಿದೆ. ನ್ಯಾಯಾಲಯಕ್ಕೆ ಸರ್ಕಾರದ ಪರ ವಕೀಲರು ಮಂಡಳಿಯ ಅವ್ಯವಹಾರ ಕುರಿತು ಮಾಡಲಾದ ತನಿಖೆಯು ಇನ್ನು ತನಿಖಾ ಹಂತದಲ್ಲಿದ್ದು, ತನಿಖಾ ವರದಿ ಬಂದ ಮೇಲೆ ಸೂಕ್ತಕ್ರಮಕೈಗೊಳ್ಳಲಾಗುವುದೆಂದು ಸಮಜಾಯಿಸಿ ನೀಡಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಆದಾಗ್ಯೂ, ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಕಳೆದ ಜನವರಿ ೨೮ರಂದು ಚುಕ್ಕೆ ಗುರುತಿನ ಸಂಖ್ಯೆ: ೩೯೪ರ ಪ್ರಶ್ನೆಗೆ ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ನೀಡಿರುವ ಉತ್ತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅವ್ಯವಹಾರಗಳ ಕುರಿತು ಮಾಡಲಾದ ತನಿಖೆಯ ವರದಿಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಸದರಿ ಸರ್ಕಾರ ಪರ ವಕೀಲರು ಇನ್ನು ತನಿಖಾ ಹಂತದಲ್ಲಿ ಇದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ರಮೇಶ್ ಹಡಪದ್, ಯಶವಂತರಾವ್ ಸೂರ್ಯವಂಶಿ, ವಿಜಯ್ ಜಾಧವ್, ಸಂಜು ಹೊಡಲಕರ್, ಪ್ರಕಾಶ್ ಪಟ್ಟೇದಾರ್ ಮುಂತಾದವರು ಉಪಸ್ಥಿತರಿದ್ದರು.



