ಸಾಂಸ್ಕೃತಿಕ

ಆಗಸ್ಟ್ 16ರಂದು ಕಲಬುರಗಿಯಲ್ಲಿ ಪ್ರಥಮ ಜಿಲ್ಲಾ ಕವಯಿತ್ರಿಯರ ಸಮ್ಮೇಳನ: ಅಧ್ಯಕ್ಷೆಯಾಗಿ ಶಕುಂತಲಾ ಪಾಟೀಲ ಜಾವಳಿ ಆಯ್ಕೆ

ಹಿರಿಯ ಕವಯಿತ್ರಿ–ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರಿಗೆ ಗೌರವ; ಕನ್ನಡ ಸಾಹಿತ್ಯ ಕ್ಷೇತ್ರದ ಸೇವೆಗೆ ಮತ್ತೊಂದು ಮನ್ನಣೆ

ಕಲಬುರಗಿ, ಜು.28: ಆಗಸ್ಟ್ 16ರಂದು ಕಲಬುರಗಿ ನಗರದ ಕನ್ನಡ ಭವನದಲ್ಲಿ ನಡೆಯಲಿರುವ ಒಂದು ದಿನದ ಪ್ರಥಮ ಜಿಲ್ಲಾ ಕವಯಿತ್ರಿಯರ ಸಮ್ಮೇಳನದ ಅಧ್ಯಕ್ಷೆಯಾಗಿ ಹಿರಿಯ ಕವಯಿತ್ರಿ ಹಾಗೂ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಈ ಕುರಿತು ನಡೆದ ಸಭೆಯಲ್ಲಿ ರೇಣುಕಾ ಡಾಂಗೆ, ನಂದಿನಿ ಸನಬಾಳ, ರಾಜೇಂದ್ರ ಮಾಡಬೂಳ, ಗಣೇಶ್ ಚಿನ್ನಾಕಾರ್, ಬಾಬುರಾವ್ ಪಾಟೀಲ, ಧರ್ಮರಾಜ್ ಜಾವಳಿ, ಸೋಮಶೇಖರಯ್ಯ ಹೊಸಮಠ, ಸೈಯದ್ ನಜೀರುದ್ದೀನ್ ಮುಂತಾದವರು ಸೇರಿದಂತೆ ಹಲವರು ಭಾಗವಹಿಸಿ ಆಯ್ಕೆಗೆ ಅನುಮೋದನೆ ನೀಡಿದರು.

ಶಕುಂತಲಾ ಪಾಟೀಲ ಜಾವಳಿ ಅವರು ಕಲಬುರಗಿ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿರಿಯ ಕವಯಿತ್ರಿ ಹಾಗೂ ಲೇಖಕಿಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶಿವಶರಣ ಪಾಟೀಲ ಜಾವಳಿ ಅವರ ಕುಟುಂಬದ ಸಾಹಿತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಅವರು ಓದು, ಬರಹ ಮತ್ತು ಪ್ರಕಟಣೆಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.

ಆಳಂದ ತಾಲೂಕಿನ ಜಾವಳಿ (ಡಿ) ಗ್ರಾಮದಲ್ಲಿ ಜನಿಸಿದ ಶಕುಂತಲಾ ಪಾಟೀಲ ಜಾವಳಿ ಅವರು ‘ಜೀವಯಾನ’ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರಾದರು. ಔಪಚಾರಿಕ ಶಿಕ್ಷಣ ಸೀಮಿತವಾಗಿದ್ದರೂ ಸಾಹಿತ್ಯದ ಮೇಲಿನ ಅಪಾರ ಆಸಕ್ತಿ ಮತ್ತು ನಿರಂತರ ಪರಿಶ್ರಮದಿಂದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅವರು ಜೀವನಾನುಭವ, ಗ್ರಾಮೀಣ ಬದುಕು, ಶರಣ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ‘ಜೀವಯಾನ’, ‘ಬೆಳಕು ಮೂಡಿದಾಗ’, ‘ಆಧುನಿಕ ವಚನಗಳು’, ‘ಬೆಳಕು ತುಂಬಿದ ಭಾವ’, ‘ಅನುಭವಾಮೃತ’ ಸೇರಿದಂತೆ ಹಲವು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸೇವೆ ಹಾಗೂ ಸೃಜನಶೀಲತೆಯನ್ನು ಪರಿಗಣಿಸಿ ಪ್ರಥಮ ಜಿಲ್ಲಾ ಕವಯಿತ್ರಿಯರ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಆಗಸ್ಟ್ 16ರಂದು ನಡೆಯಲಿರುವ ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಕವಯಿತ್ರಿಯರು, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ.

Related Articles

Leave a Reply

Your email address will not be published. Required fields are marked *

Back to top button