ಅಪರಾಧಜಿಲ್ಲಾಸುದ್ದಿ

ಕೇಬಲ್ ವೈರ್, ಮೋಟರ್ ಪಂಪ್, ಸ್ಟಾರ್ಟರ್ ಕಳವು: ಆರು ಮಂದಿ ಆರೋಪಿಗಳ ಬಂಧನ

ಅಫಜಲಪುರ, ಅ. 6: ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ರೈತರು ಹಾಗೂ ಇತರರಿಗೆ ಸೇರಿದ ಕೇಬಲ್ ವೈರ್, ಮೋಟರ್ ಪಂಪ್ ಮತ್ತು ಸ್ಟಾರ್ಟರ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಆರು ಮಂದಿಯನ್ನು ಬಂಧಿಸಿ, ₹1.86 ಲಕ್ಷ ಮೌಲ್ಯದ 4,620 ಅಡಿ ಕೇಬಲ್ ವೈರ್ ಹಾಗೂ ₹9,600 ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಪಟ್ಟಣದ ಕೂಪೇಂದ್ರ ಆಸ್ಪತ್ರೆ ಸಮೀಪದ ನಿವಾಸಿ ಅರುಣ್ ತಂದೆ ಪೀರಪ್ಪ ಸಿನ್ನೂರ್, ಅಂಬಿಗರ ಚೌಡಯ್ಯ ನಗರದ ಮಂಜುನಾಥ ತಂದೆ ಪೀರಪ್ಪ ತಂಬೇವಾಡ, ಶಂಕರ ತಂದೆ ಮೌನೇಶ ಸುತಾರ್, ದುಂಡೇಶ ತಂದೆ ಮಾಳಪ್ಪ ಅಳ್ಳಗಿ, ಲಿಂಬಿತೋಟದ ಮಣಿಕಂಠ ತಂದೆ ಶ್ರೀಶೈಲ ಶಟಗಾರ ಹಾಗೂ ಏಂಜಿ ನಗರದ ನಿವಾಸಿ ಸಂದೀಪ್ ತಂದೆ ಶರಣಪ್ಪ ಗಾಯಕ್ವಾಡ ಎಂದು ಗುರುತಿಸಲಾಗಿದೆ.

ಮಣ್ಣೂರ ಗ್ರಾಮದ ಚಂದ್ರಕಾಂತ ತಂದೆ ವಿಠ್ಠಲ ಹಳಿಮನಿ ಅವರು ಸೆ.17ರಂದು ತಮ್ಮದು ಹಾಗೂ ಇತರ 11 ಮಂದಿಗೆ ಸೇರಿದ ಮೋಟರ್ ಪಂಪ್‌ಗಳ ಕೇಬಲ್ ವೈರ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವ ಕುರಿತು ದೂರು ನೀಡಿದ್ದರು. ಇದೇ ರೀತಿ ದೇಸಾಯಿ ಕಲ್ಲೂರ ಹಾಗೂ ಅಫಜಲಪುರ ಗಡಿಭಾಗದಲ್ಲಿ ರೈತರ ಮೋಟರ್ ಪಂಪ್, ಕೇಬಲ್ ವೈರ್ ಮತ್ತು ಸ್ಟಾರ್ಟರ್‌ಗಳನ್ನು ಕಳವು ಮಾಡಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಮೂರು ಪ್ರಕರಣಗಳಲ್ಲಿ ಕೇಬಲ್ ವೈರ್ ವಶ

ಆಳಂದ ಡಿವೈಎಸ್‌ಪಿ ತಮ್ಮಯ್ಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಿಪಿಐ ಲಖನ್ ಆರ್. ಮಸಗುಪ್ಪಿ ಅವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀಶೈಲ ಅಂಬಾಟಿ, ಎಎಸ್‌ಐ ರಾಜಶೇಖರ ಹಾಗೂ ಸಿಬ್ಬಂದಿ ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದರು.

ಈ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ₹71,600 ಮೌಲ್ಯದ 1,790 ಅಡಿ ಕೇಬಲ್ ವೈರ್, ₹82,000 ಮೌಲ್ಯದ 2,050 ಅಡಿ ಕೇಬಲ್ ವೈರ್ ಹಾಗೂ ₹28,000 ಮೌಲ್ಯದ 700 ಅಡಿ ಕೇಬಲ್ ವೈರ್ ಸೇರಿದಂತೆ ಒಟ್ಟು ₹1,81,600 ಮೌಲ್ಯದ ಕೇಬಲ್ ವೈರ್ ವಶಪಡಿಸಿಕೊಂಡಿದೆ.

ಇನ್ನೊಂದು ಪ್ರಕರಣದಲ್ಲಿ ₹9,600 ನಗದು ವಶ

ಮತ್ತೊಂದು ಪ್ರಕರಣದಲ್ಲಿ ಏಂಜಿ ನಗರದ ನಿವಾಸಿ ಸಂದೀಪ್ ತಂದೆ ಶರಣಪ್ಪ ಗಾಯಕ್ವಾಡ ಹಾಗೂ ಅಂಬಿಗರ ಚೌಡಯ್ಯ ನಗರದ ದುಂಡೇಶ ತಂದೆ ಮಾಳಪ್ಪ ಅಳ್ಳಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರಿಂದ ₹9,600 ನಗದು ಹಾಗೂ ₹4,800 ಮೌಲ್ಯದ 80 ಅಡಿ ಕೇಬಲ್ ವೈರ್ ವಶಪಡಿಸಿಕೊಳ್ಳಲಾಗಿದೆ.

ಒಟ್ಟು ನಾಲ್ಕು ಪ್ರಕರಣಗಳಲ್ಲಿ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ₹1,86,400 ಮೌಲ್ಯದ 4,620 ಅಡಿ ಕೇಬಲ್ ವೈರ್ ಹಾಗೂ ₹9,600 ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button