ಜಿಲ್ಲಾಸುದ್ದಿ

ಯಡಗಾದಲ್ಲಿ ೧೩ ಎಕರೆ ಕಬ್ಬು ಭಸ್ಮ: ಎಕರೆಗೆ ₹೨ ಲಕ್ಷ ಪರಿಹಾರಕ್ಕೆ ತೆಲ್ಕೂರ ಆಗ್ರಹ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಳೆ ನಾಶ ಆರೋಪ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾಜಿ ಶಾಸಕ ಆಕ್ರೋಶ

ಸೇಡಂ, ಅ. ೨೨: ತಾಲ್ಲೂಕಿನ ಯಡಗಾ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಬೆಳೆಗೆ ಬೆಂಕಿ ತಗುಲಿ ಸುಮಾರು ೧೩ ಎಕರೆ ಪ್ರದೇಶದ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಸಂತ್ರಸ್ತ ರೈತರಿಗೆ ಪ್ರತಿ ಎಕರೆಗೆ ₹೨ ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಆಗ್ರಹಿಸಿದ್ದಾರೆ.

ಗುರುವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ತಂಡದೊಂದಿಗೆ ಯಡಗಾ ಗ್ರಾಮಕ್ಕೆ ಭೇಟಿ ನೀಡಿ ಬೆಂಕಿಯಿಂದ ಹಾನಿಗೊಳಗಾದ ಕಬ್ಬಿನ ಹೊಲಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಮೂರು ರೈತರ ಕಬ್ಬಿನ ಬೆಳೆ ನಾಶ

ಗ್ರಾಮದ ರೈತರಾದ ಪಾರ್ವತಿ ಗಂಡ ಕಲ್ಲಪ್ಪ ತಾಡಪಳ್ಳಿ ಅವರ ಸರ್ವೆ ನಂಬರ್ ೧೪೬ರಲ್ಲಿನ ನಾಲ್ಕು ಎಕರೆ, ಗೌಡಪ್ಪ ತಾಡಪಳ್ಳಿ ಅವರ ಸರ್ವೆ ನಂಬರ್ ೧೪೭ರಲ್ಲಿನ ಮೂರು ಎಕರೆ ಹಾಗೂ ಪಂಡಿತರಾವ್ ಗೌಣಗೌಡ ಅವರ ಸರ್ವೆ ನಂಬರ್ ೧೪೫/೧ರಲ್ಲಿನ ಆರು ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿಸಿದರು.

ಒಟ್ಟು ೧೩ ಎಕರೆ ಕಬ್ಬು ಸಂಪೂರ್ಣ ನಾಶವಾಗಿದ್ದು, ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ

ಘಟನೆ ನಡೆದು ೪೮ ಗಂಟೆಗಳು ಕಳೆದರೂ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿಲ್ಲ ಎಂದು ತೆಲ್ಕೂರ ಅಸಮಾಧಾನ ವ್ಯಕ್ತಪಡಿಸಿದರು. ಬೆಳೆ ಕಳೆದುಕೊಂಡ ರೈತರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ಅಧಿಕಾರಿಗಳು ತೋರಿಸಿಲ್ಲ ಎಂದು ಟೀಕಿಸಿದರು.

ಶಾಸಕ ಶರಣಪ್ರಕಾಶ್ ಪಾಟೀಲ ಅವರ ಅವಧಿಯಲ್ಲಿ ಅಧಿಕಾರಿಗಳು ರೈತರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ರೈತವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.

ತಕ್ಷಣ ಜಂಟಿ ಸಮೀಕ್ಷೆಗೆ ಒತ್ತಾಯ

ತಹಶೀಲ್ದಾರ್, ಕೃಷಿ ಇಲಾಖೆ ಹಾಗೂ ಜೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲನೆ ನಡೆಸಬೇಕು. ಬೆಳೆ ನಷ್ಟದ ಪಂಚನಾಮೆ ನಡೆಸಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರಿಗೆ ಪ್ರತಿ ಎಕರೆಗೆ ₹೨ ಲಕ್ಷದಂತೆ ಜೆಸ್ಕಾಂ ಹಾಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ಬೇಡಿಕೆ ಈಡೇರದಿದ್ದರೆ ರೈತರ ಪರವಾಗಿ ಬಿಜೆಪಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button