ಬೀದರ್ನಲ್ಲಿ ೪೬ ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ
ರಾಮಲೀಲಾ ಉತ್ಸವದಲ್ಲಿ ಕಾಕ್ರೋಚ್ ಚಿತ್ರ ದಹನ, ಆಕರ್ಷಕ ಪಟಾಕಿ ಪ್ರದರ್ಶನ

ಬೀದರ್, ಅ. ೨೨: ವಿಜಯದಶಮಿ ಹಬ್ಬದ ಅಂಗವಾಗಿ ನಗರದ ಬಿಸಿಎಂ ವಸತಿನಿಲಯದ ಸಮೀಪದ ಸಾಯಿ ಆದರ್ಶ ಶಾಲೆಯ ಮೈದಾನದಲ್ಲಿ ಶ್ರೀ ರಾಮಲೀಲಾ ಉತ್ಸವ ಸಮಿತಿ ಆಯೋಜಿಸಿದ್ದ ೨೦ನೇ ವರ್ಷದ ರಾಮಲೀಲಾ ಉತ್ಸವ ಸಂಭ್ರಮದಿಂದ ನಡೆಯಿತು. ಉತ್ಸವದ ಪ್ರಮುಖ ಆಕರ್ಷಣೆಯಾಗಿ ೪೬ ಅಡಿ ಎತ್ತರದ ರಾವಣನ ಪ್ರತಿಕೃತಿ ಹಾಗೂ ಅದರ ಎದೆಯ ಮೇಲೆ ಅಳವಡಿಸಿದ್ದ ಕಾಕ್ರೋಚ್ (ಜಿರಳೆ) ಚಿತ್ರವನ್ನು ದಹಿಸಲಾಯಿತು. ಆಕರ್ಷಕ ಪಟಾಕಿ ಪ್ರದರ್ಶನ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.
ಎರಡು ದಿನಗಳ ಕಾಲ ನಡೆದ ಉತ್ಸವದ ಮೊದಲ ದಿನವಾದ ಅಕ್ಟೋಬರ್ ೨೦ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎರಡನೇ ದಿನವಾದ ಬುಧವಾರ ಸಂಜೆ ರಾಮಲೀಲಾ ಕಾರ್ಯಕ್ರಮದೊಂದಿಗೆ ಉತ್ಸವದ ಸಂಭ್ರಮ ಕಳೆಗಟ್ಟಿತು.
ಭರತನಾಟ್ಯ ಪ್ರದರ್ಶನಕ್ಕೆ ಮೆಚ್ಚುಗೆ
ರಾಣಿ ಸತ್ಯಮೂರ್ತಿ ಅವರ ನೇತೃತ್ವದ ನಾಟ್ಯಶ್ರೀ ನೃತ್ಯಾಲಯದ ತಂಡ ಹಾಗೂ ಉಷಾ ಪ್ರಭಾಕರ್ ಅವರ ನೇತೃತ್ವದ ನೂಪುರ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಕಲಾವಿದರ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ೪೬ ಅಡಿ ಎತ್ತರದ ರಾವಣನ ಪ್ರತಿಕೃತಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಈ ಬಾರಿ ರಾವಣನ ಎದೆಯ ಮೇಲೆ ಕಾಕ್ರೋಚ್ ಚಿತ್ರದ ಪ್ರತಿಕೃತಿಯನ್ನು ಅಳವಡಿಸಿ ದಹಿಸಿದ್ದು ವಿಶೇಷವಾಗಿತ್ತು. ಆಕಾಶದಲ್ಲಿ ಚಿಮ್ಮಿದ ಬಣ್ಣಬಣ್ಣದ ಪಟಾಕಿಗಳು ಉತ್ಸವದ ಮೆರುಗನ್ನು ಹೆಚ್ಚಿಸಿದವು. ಸಾವಿರಾರು ಜನರು ರಾವಣ ದಹನದ ದೃಶ್ಯವನ್ನು ಕಣ್ತುಂಬಿಕೊಂಡರು.
ಸಂಸ್ಕೃತಿ, ಪರಂಪರೆ ಪರಿಚಯಿಸುವ ಉದ್ದೇಶ
ಉತ್ಸವದ ಉದ್ದೇಶದ ಕುರಿತು ಮಾತನಾಡಿದ ಸಮಿತಿಯ ಮುಖ್ಯಸ್ಥ ಈಶ್ವರಸಿಂಗ್ ಠಾಕೂರ್, ಪುರಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಪುನರುಜ್ಜೀವನಗೊಳಿಸಿ ಯುವಜನತೆಗೆ ಪರಿಚಯಿಸುವುದು ಹಾಗೂ ಹಿಂದೂ ಸಮಾಜವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ತಿಳಿಸಿದರು.
ದೇಶವನ್ನು ಒಡೆಯಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕಾಕ್ರೋಚ್ ಚಿತ್ರದ ದಹನದ ಮೂಲಕ ಸಾಂಕೇತಿಕ ಸಂದೇಶ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಲ್ಲವಿ ಪಾಂಚಾಳ್ ಹಾಗೂ ಚಂಚಲ್ ರೆಡ್ಡಿ ಖಾಜಾಪುರ ಅವರಿಗೆ ನಾರಿ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮಾಜಿ ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರ, ಸರದಾರ್ ಬಲಬೀರ್ ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಗುರುನಾಥ ಕೊಳ್ಳೂರ, ಜೈರಾಜ್ ಖಂಡ್ರೆ, ಶಂಕರರಾವ್ ಕೊಟ್ಟರಕಿ, ಗೀತಾ ಪಂಡಿತ ಚಿದ್ರಿ, ಬಾಬು ವಾಲಿ, ರಾಮಕೃಷ್ಣ ಸಾಳೆ, ಡಾ. ರಜನೀಶ್ ವಾಲಿ, ರಮೇಶ್ ಗೋಯಲ್, ನಿತಿನ್ ಗೋಯಲ್, ರಾಜೇಂದ್ರ ಶರ್ಮಾ, ಉಪೇಂದ್ರ ದೇಶಪಾಂಡೆ, ಲವ್ನೀತ್ ಸಿಂಗ್ (ರೋಹಿತ್), ಅಶೋಕ್ ರೆಜಂತಲ್, ದೀಪಕ್ ಗಾದಗೆ, ಜಗನ್ನಾಥ ಜಮಾದಾರ, ಬಾಬು ಮಲ್ಕಾಪುರ, ಮನೋಹರ ದಂಡೆ ಹಾಗೂ ವಿರೂಪಾಕ್ಷ ಗಾದಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



