
ಕಲಬುರಗಿ, ಅ.22: ನಗರದ ಸೇಡಂ ರಸ್ತೆಯಲ್ಲಿರುವ ಹಳೆಯ ಆರ್‌ಟಿಒ ಕಚೇರಿ ಎದುರಿನ ಚಂದ್ರಶೇಖರ ಪಾಟೀಲ ವಿದ್ಯಾರ್ಥಿನಿಲಯ ಆವರಣದ ಎಂಆರ್‌ಎಂಸಿ ಸ್ಯಾಕ್ ಕಟ್ಟಡದಲ್ಲಿ ಅಕ್ಟೋಬರ್ 24ರಂದು ಬೆಳಿಗ್ಗೆ 10.30ಕ್ಕೆ ಹಿರಿಯ ಚಿತ್ರಕಲಾವಿದ ನಾಡೋಜ್ ಜೆ.ಎಸ್. ಖಂಡೇರಾವ್ ಅವರ ‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರಭುರಾಜ್ ಬಿ. ಕಾಂತಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಗ್ರಂಥ ಬಿಡುಗಡೆ ಮಾಡಲಿದ್ದು, ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಸಮಾಧಾನದ ಮೌನ ತಪಸ್ವಿ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮೀಜಿ, ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವಿಕ್ರಮ್ ವಿಸಾಜಿ ಅವರು ಗ್ರಂಥದ ಕುರಿತು ಮಾತನಾಡಲಿದ್ದಾರೆ. ಡಾ. ಜಿ.ಎಸ್. ಖಂಡೇರಾವ್ ಅವರು ಗೌರವ ಉಪಸ್ಥಿತರಾಗಿರಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಕಾಸ ಅಕಾಡೆಮಿಯ ಸಂಸ್ಥಾಪಕ ಹಾಗೂ ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹಿರಿಯ ಶಿಲ್ಪಕಲಾವಿದ ವೆಂಕಟಾಚಲಪತಿ, ಹಿರಿಯ ವೈದ್ಯ ಸಾಹಿತಿ ಡಾ. ಪಿ.ಎಸ್. ಶಂಕರ, ಖ್ಯಾತ ಚಿತ್ರಕಲಾವಿದ ಡಾ. ವಿ.ಜಿ. ಅಂದಾನಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಚಿರಂಜೀವಿ ಸಿಂಗ್, ನ್ಯಾಯಮೂರ್ತಿ ಶಿವರಾಜ ಪಾಟೀಲ, ಪ.ಸ. ಕುಮಾರ, ಡಾ. ಸಂಜೀವ ಕಿಶೋರ್, ಗೌತಮ್, ಪದ್ಮಶ್ರೀ ಅದ್ವೈತ ಚರಣ್ ಗಡನಾಯಕ, ಪದ್ಮಶ್ರೀ ವಾಸುದೇವ ಕಾಮತ್, ಮ.ಗು. ಬಿರಾದಾರ, ಎ.ಕೆ. ರಾಮೇಶ್ವರ, ಡಾ. ಎ.ಎಸ್. ಪಾಟೀಲ, ಎಸ್.ಜಿ. ವಾಸುದೇವ್, ಕೆ.ವಿ. ಸುಬ್ರಹ್ಮಣ್ಯಂ, ಅನಿಲ್ ನಾಯಕ್, ರಾಜೇಂದ್ರ ಪಾಟೀಲ, ಪ್ರೊ. ವಿಶ್ವನಾಥ ಸಾಬಳೆ, ರೇಖಾ ಹೆಬ್ಬಾರರಾವ್, ಡಾ. ಸುಚೇತಾ ಪಿ. ಕಾಂತಾ, ಎನ್.ಎಸ್. ದೇವರಕಲ್, ಟಿ.ವಿ. ಶಿವಾನಂದನ್, ಅಜಯ್ಯ ಚಾವುಲ್ಕರ್ ಹಾಗೂ ಕೃಷ್ಣ ರಾಯಚೂರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಂಥದ ಲೇಖಕ ಡಾ. ಅಶೋಕ ಶಟಕಾರ್, ಎನ್‌ಎಂ ಪ್ರಿಂಟರ್ಸ್‌ನ ನೀಲಕಂಠ ಸಿ. ಬಿರಾದಾರ, ಗ್ರಂಥ ವಿನ್ಯಾಸಕಾರ ರಾಮಲಿಂಗ ಬೆಳಕೋಟೆ ಹಾಗೂ ಹಿರಿಯ ಶಿಲ್ಪಕಲಾವಿದ ಮಾನಯ್ಯ ಬಡಿಗೇರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಡಾ. ಪ್ರಭುರಾಜ್ ಬಿ. ಕಾಂತಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಸೀತನೂರ, ನಾರಾಯಣ ಎಂ. ಜೋಶಿ, ಬಸವರಾಜ್ ಜಿ. ಖಂಡೇರಾವ್, ಅಶೋಕ ಶಟಕಾರ್ ಹಾಗೂ ಡಾ. ಪರಶುರಾಮ್ ಪಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



