ಸಾಂಸ್ಕೃತಿಕಸಾಹಿತ್ಯ

ಕಲಬುರಗಿ ಜಿಲ್ಲಾ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ: ಸ್ವಾಗತ ಸಮಿತಿಗೆ ಬಲೂಂಡಗಿ, ನಾಗವೇಣಿ ಕಾಮಕನೂರಗೆ ಸನ್ಮಾನ

ಅ.೨೮ ಮತ್ತು ೨೯ರಂದು ವಿಶ್ವೇಶ್ವರಯ್ಯ ಭವನದಲ್ಲಿ ಎರಡು ದಿನಗಳ ಸಾಹಿತ್ಯ ಸಮ್ಮೇಳನ

ಕಲಬುರಗಿ, ಅ.೨೩: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಕ್ಟೋಬರ್ ೨೮ ಮತ್ತು ೨೯ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿರುವ ಜಿಲ್ಲಾ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಸಮ್ಮೇಳನದ ಯಶಸ್ಸಿಗಾಗಿ ರಚಿಸಿರುವ ಸ್ವಾಗತ ಸಮಿತಿಯ ಅಧ್ಯಕ್ಷ ಬಸವರಾಜ ಬಲೂಂಡಗಿ ಹಾಗೂ ಗೌರವಾಧ್ಯಕ್ಷೆ, ಮಾಜಿ ಉಪಮಹಾಪೌರ ನಾಗವೇಣಿ ತಿಪ್ಪಣ್ಣಪ್ಪ ಕಾಮಕನೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ ನಾಗವೇಣಿ ಕಾಮಕನೂರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಈ ಹಿಂದೆ ಪಂಡಿತರು ಹಾಗೂ ಸಾಹಿತಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಜಿಲ್ಲೆಯಲ್ಲಿ ಸಾಮಾನ್ಯ ಜನರ ಸಹಭಾಗಿತ್ವದೊಂದಿಗೆ ಬೆಳೆದು, ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಯಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಲೂಂಡಗಿ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ. ಕನ್ನಡಾಭಿಮಾನ ಬೆಳೆಸುವ ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿ, ಸಂಸ್ಕೃತಿ ಮತ್ತು ಸಾಹಿತ್ಯದ ರಕ್ಷಣೆಗೆ ಪರಿಷತ್ತು ಶ್ರಮಿಸುತ್ತಿದೆ. ತಮ್ಮ ಐದು ವರ್ಷಗಳ ಅವಧಿಯಲ್ಲಿ ಆರು ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ರಾಜ್ಯದಲ್ಲಿ ಗಮನ ಸೆಳೆದಿದೆ. ಅಲ್ಲದೆ, ೧೬ ವಿಶೇಷ ಸಮ್ಮೇಳನಗಳು ಹಾಗೂ ನೂರಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂಬರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನೂ ಅರ್ಥಪೂರ್ಣವಾಗಿ ರೂಪಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸೈಯದ್ ನಜೀರುದ್ದೀನ್, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ಹನುಮಂತರಾವ್ ಪೆಂಚನಪಳ್ಳಿ, ನಾಗರಾಜ ಪಾಟೀಲ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ರವಿಕುಮಾರ ಶಹಾಪೂರಕರ್, ರಾಜು ಕೋಷ್ಟಿ, ಪ್ರೊ. ಬಿ.ಎ. ಪಾಟೀಲ ಮಹಾಗಾಂವ, ಸಂಗಣ್ಣ ಚೋರಗಸ್ತಿ, ಮಲ್ಲಿನಾಥ ಸಂಗಶೆಟ್ಟಿ, ಜಯಶ್ರೀ ಜಮಾದಾರ, ಪ್ರಭುಶೆಟ್ಟಿ ಮುದ್ದಾ, ನಾಗರಾಜ ಪೂಜಾರಿ, ಮಲ್ಲಿಕಾರ್ಜುನ ಯಂಕಂಚಿ ಹಾಗೂ ಚಂದ್ರಕಾಂತ ಸೂರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಡಾ. ಸುರೇಶ ಶರ್ಮಾ ಅವರನ್ನು ಗೌರವಾಧ್ಯಕ್ಷರಾಗಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಕಾಶಿನಾಥ ಪಲ್ಲೇರಿ ಅವರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಯಿತು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button