ಜಿಲ್ಲಾಸುದ್ದಿ

ಮುರ್ಕಿ ಸೋಲಾರ್ ಘಟಕ ಪರಿಶೀಲನೆ: ಸ್ಥಳೀಯರಿಗೆ ಉದ್ಯೋಗ, ರೈತರಿಗೆ ನ್ಯಾಯಯುತ ಪರಿಹಾರಕ್ಕೆ ಪ್ರಭು ಚವ್ಹಾಣ್ ಒತ್ತಾಯ

ಕಮಲನಗರ, ಅ.8– ತಾಲ್ಲೂಕಿನ ಮುರ್ಕಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಘಟಕಕ್ಕೆ ಔರಾದ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಬಿ. ಚವ್ಹಾಣ್ ಇತ್ತೀಚೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಹಾಗೂ ಘಟಕದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಘಟಕದ ಆವರಣದಲ್ಲಿ ಸಂಚರಿಸಿದ ಅವರು, ಅಳವಡಿಸಲಾಗುತ್ತಿರುವ ಯಂತ್ರೋಪಕರಣಗಳು ಹಾಗೂ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ಬಳಿಕ ಸಂಬಂಧಿಸಿದ ಅಧಿಕಾರಿಗಳು ಮತ್ತು ಘಟಕದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಘಟಕದ ಸಾಮರ್ಥ್ಯ, ಕಾಮಗಾರಿಯ ಪ್ರಗತಿ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದರು.

ಸಭೆಯಲ್ಲಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ್, ಔರಾದ (ಬಿ) ಹಾಗೂ ಕಮಲನಗರ ತಾಲ್ಲೂಕಿನ ಯುವಜನತೆಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಬೇಕು. ಇದರ ಜೊತೆಗೆ ಈ ಭಾಗದ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಹೇಳಿದರು.

ಈ ಭಾಗಕ್ಕೆ ಕೈಗಾರಿಕೆಗಳು ಹಾಗೂ ಸೋಲಾರ್ ಕಂಪನಿಗಳನ್ನು ತರಲು ಸಾಕಷ್ಟು ಪ್ರಯತ್ನ ನಡೆಸಿ, ವಿದ್ಯುತ್ ಪ್ರಸರಣ ಉಪಕೇಂದ್ರವನ್ನು ತರಲಾಗಿದೆ. ಇದರ ಫಲವಾಗಿ ಕ್ಷೇತ್ರಕ್ಕೆ ಹಲವು ಸೋಲಾರ್ ಕಂಪನಿಗಳು ಬರುತ್ತಿದ್ದು, ಬಂಜರು ಭೂಮಿಗೂ ಬೇಡಿಕೆ ಹೆಚ್ಚಾಗಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ ಎಂದು ತಿಳಿಸಿದರು.

ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸೂಚನೆ

ಸೋಲಾರ್ ಯೋಜನೆಗಳಿಗೆ ಜಮೀನು ನೀಡಿರುವ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಎಂದು ಪ್ರಭು ಚವ್ಹಾಣ್ ಒತ್ತಾಯಿಸಿದರು. ಪಕ್ಕದ ಮಹಾರಾಷ್ಟ್ರದ ಮಾದರಿಯಲ್ಲಿ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಮೀನು ನೀಡಿರುವ ರೈತ ಕುಟುಂಬಗಳ ಯುವಜನತೆಗೆ ಸೋಲಾರ್ ಘಟಕಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು. ತಾಂತ್ರಿಕ ಅರ್ಹತೆ ಅಗತ್ಯವಿರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಸ್ಥಳೀಯ ಯುವಕರನ್ನೇ ನೇಮಿಸಿಕೊಳ್ಳಬೇಕು ಎಂದು ಘಟಕದ ಪ್ರತಿನಿಧಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಸೋಲಾರ್ ಘಟಕಗಳ ಕಾರ್ಯಾಚರಣೆಗೆ ಅಗತ್ಯವಿರುವ ವಾಹನಗಳು, ಜೆಸಿಬಿ, ಟಿಪ್ಪರ್ ಸೇರಿದಂತೆ ಇತರೆ ವಾಹನ ಮತ್ತು ಸೇವೆಗಳನ್ನು ಸ್ಥಳೀಯರಿಂದಲೇ ಪಡೆಯಬೇಕು. ಸ್ಥಳೀಯರಿಗೆ ಸಿಗಬೇಕಾದ ಯಾವುದೇ ಅವಕಾಶವನ್ನು ಹೊರಗಿನವರಿಗೆ ನೀಡಬಾರದು ಎಂದು ಹೇಳಿದರು.

ಜಮೀನು ನೀಡಿರುವ ರೈತರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ. ರೈತರಿಗೆ ಸಕಾಲದಲ್ಲಿ ಪರಿಹಾರ ಕಲ್ಪಿಸಬೇಕು ಹಾಗೂ ಪರಿಹಾರದ ಮೊತ್ತದಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಅವರು ಸೂಚಿಸಿದರು.

ವಿಶೇಷವಾಗಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ರೈತರಿಗೆ ನೇರವಾಗಿ ಅನುಕೂಲವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ತಾವು ಅಭಿವೃದ್ಧಿಯ ಪರವಾಗಿದ್ದು, ತಮ್ಮ ಸಹಕಾರ ಸದಾ ಇರಲಿದೆ. ಆದರೆ ರೈತರಿಗೆ ತೊಂದರೆ ನೀಡಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಜು ಮುರ್ಕೆ, ನಂದು ಕಾಳೆ, ಅಶೋಕ ಹಲಮಂಡಗೆ, ಸಂತೋಷ ಬಾರೋಳೆ, ಶತೃಘ್ನ ಜೋಳದಾಬಕೆ, ಕಾಳಿದಾಸ ಅಡೆ, ರಾಜಕುಮಾರ ಬಾರೋಳೆ ಸೇರಿದಂತೆ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button