ಜಿಲ್ಲಾಸುದ್ದಿ

ಬರ: ಹೆಕ್ಟೇರ್‌ಗೆ ₹35 ಸಾವಿರ ಪರಿಹಾರ ನೀಡಲು ಸಚಿವರಿಗೆ ಮನವಿ

ಬೀದರ್, ಅ.8– ಬರದಿಂದ ಬೆಳೆ ಹಾನಿಗೊಳಗಾದ ಜಿಲ್ಲೆಯ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಹೆಕ್ಟೇರ್‌ಗೆ ₹35 ಸಾವಿರ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮಯ್ಯ ಸ್ವಾಮಿ ಹಾಗೂ ರಾಜ್ಯ ನಿರ್ದೇಶಕ ವಿಶ್ವನಾಥ ಪಾಟೀಲ ಮಾಡಗೂಳ್ ಒತ್ತಾಯಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಗುರುವಾರ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಸಣ್ಣ ಹಾಗೂ ಅತಿಸಣ್ಣ ರೈತರು ಸೇರಿದಂತೆ ಎಲ್ಲ ರೈತರ ₹2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಬೇಕು. ಹಿಂಗಾರು ಹಂಗಾಮಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಅಥವಾ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಮೂಲಕ ಮುಂದಿನ ವರ್ಷದಿಂದಲೇ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾರ್ಖಾನೆಯಲ್ಲಿ ಸುಮಾರು 25 ಸಾವಿರ ಷೇರುದಾರರಿದ್ದು, ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡದ ಕಾರಣ ಬ್ಯಾಂಕ್‌ನಿಂದ ಎರಡು ಬಾರಿ ಹರಾಜು ಪ್ರಕ್ರಿಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಬ್ಯಾಂಕ್‌ನ ಬಡ್ಡಿಯನ್ನು ಮನ್ನಾ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಮ್ಮ ಮನವಿಗೆ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ದರಾಮಯ್ಯ ಸ್ವಾಮಿ ತಿಳಿಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button