ಕುಂಭಾರವಾಡಾ ಮಾತಾ ಕಾಳಿಕಾ ಮಂದಿರದಲ್ಲಿ ಅ.11ರಿಂದ ನವರಾತ್ರಿ ಉತ್ಸವ

ಬೀದರ್, ಅ.8– ಕುಂಭಾರವಾಡಾ ಕ್ಷೇತ್ರದ ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಅ.11ರಿಂದ 20ರವರೆಗೆ ನವರಾತ್ರಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಮಾತಾ ಕಾಳಿಕಾದೇವಿ ಸಮಸ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ ವೀರಶೆಟ್ಟಿ ಪಾಟೀಲ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಪೂಜೆ, ಅರ್ಚನೆ ಮತ್ತು ಆರತಿ ನಡೆಯಲಿದ್ದು, ಬೆಳಿಗ್ಗೆ 7ರಿಂದ 11ರವರೆಗೆ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅ.16ರಂದು ಶ್ರೀಮತಿ ಪುಣ್ಯಾವತಿಬಾಯಿ ಕೊಂಡಿ ಅವರ ಅಮೃತ ಹಸ್ತದಿಂದ ಘಟಸ್ಥಾಪನೆ ನೆರವೇರಲಿದೆ. ಅ.17ರಂದು ಸಂಜೆ 6ಕ್ಕೆ ಶ್ರೀಮತಿ ರಾಣಿ ಸತ್ಯಮೂರ್ತಿ ಅವರ ನಿರ್ದೇಶನದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಅ.21ರಂದು ವಿಜಯದಶಮಿ ಅಂಗವಾಗಿ ಶ್ರೀ ಮಾತಾ ಕಾಳಿಕಾದೇವಿ ಪಾಲಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಕುಂಭಾರವಾಡಾ ಮಂದಿರದಿಂದ ಆರಂಭವಾಗುವ ಪಾಲಕಿ ಮೆರವಣಿಗೆಯು ವಿವಿಧ ಪ್ರಮುಖ ಸ್ಥಳಗಳ ಮೂಲಕ ಸಂಚರಿಸಿ ರಾತ್ರಿ 10ಕ್ಕೆ ಮರಳಿ ಕುಂಭಾರವಾಡಾ ಕ್ಷೇತ್ರವನ್ನು ತಲುಪಲಿದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.26ರಂದು ವಿಶೇಷ ಅಭಿಷೇಕ
ಕೋಜಗಿರಿ ಪೂರ್ಣಿಮೆಯ ಪ್ರಯುಕ್ತ ಅ.26ರಂದು ಬೆಳಿಗ್ಗೆ 5ರಿಂದ 11ರವರೆಗೆ ಹಾಲು, ಮೊಸರು, ಸಕ್ಕರೆ ಹಾಗೂ ತುಪ್ಪದಿಂದ ಶ್ರೀ ಮಾತೆಗೆ ವಿಶೇಷ ಅಭಿಷೇಕ ನೆರವೇರಿಸಲಾಗುವುದು. ಭಕ್ತರಿಗೆ ಗರ್ಭಗುಡಿಯಲ್ಲಿ ಸ್ವತಃ ಅಭಿಷೇಕ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಜೆ 5ರಿಂದ ರಾತ್ರಿ 11ರವರೆಗೆ ಮಹಾಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ಇಡೀ ರಾತ್ರಿ ಭಜನೆ ಹಾಗೂ ಸಂಗೀತ ದರ್ಬಾರ್ ಆಯೋಜಿಸಲಾಗಿದೆ.
ನವರಾತ್ರಿ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಮಾತೆಯ ದರ್ಶನ ಪಡೆದು ಪುನೀತರಾಗಬೇಕು ಎಂದು ಮಂಡಳಿ ಅಧ್ಯಕ್ಷ ವಿಜಯಕುಮಾರ ವೀರಶೆಟ್ಟಿ ಪಾಟೀಲ ಮನವಿ ಮಾಡಿದ್ದಾರೆ.



