ಜಿಲ್ಲಾಸುದ್ದಿ

ಮೋದಿ 25 ವರ್ಷಗಳ ಜನಸೇವೆಗೆ ಕಲಬುರಗಿಯಲ್ಲಿ ಶಿವಸೇನೆ ಸಂಭ್ರಮೋತ್ಸವ

ಕಲಬುರಗಿ, ಅ.7: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವರ ಜನಸೇವೆ ಹಾಗೂ ರಾಜಕೀಯ ಪಯಣವನ್ನು ಗೌರವಿಸಿ ಶಿವಸೇನೆ ಕರ್ನಾಟಕ ಘಟಕದ ವತಿಯಿಂದ ರಾಜ್ಯಾದ್ಯಂತ ಸಂಭ್ರಮೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಲಬುರಗಿ ನಗರದಲ್ಲಿಯೂ ಕಾರ್ಯಕ್ರಮ ನಡೆಯಿತು.

ನಗರದ ಎಸ್‌ವಿಪಿ ವೃತ್ತದಲ್ಲಿ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಗಣಹೋಮ, ಧಾರ್ಮಿಕ ಪೂಜಾ ವಿಧಿವಿಧಾನಗಳು ಹಾಗೂ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿ, ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರು ಆಡಳಿತ ಹಾಗೂ ರಾಷ್ಟ್ರಸೇವೆಯ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆ ಸಂಘಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಸಂಘಟನಾತ್ಮಕ ಮತ್ತು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಕೇಶ್ ಜಮಾದಾರ್, ಮಲ್ಕಣ್ಣ ಹಿರೇಪೂಜಾರ, ಸಾಮಾಜಿಕ ಕಾರ್ಯಕರ್ತ ಸಿದ್ದು ಹಿರೇಮಠ, ಸತೀಶ್ ಪಾಟೀಲ, ರಾಜಕುಮಾರ ಸೀರಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದರು.

ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯನ್ನು ಗೌರವಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಸಂಘಟನಾತ್ಮಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಶಿವಸೇನೆ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button