ಭೂ ಮಾಫಿಯಾದ ಅಟ್ಟಹಾಸ: ಜಮೀನು ಕಬಳಿಕೆ ಆರೋಪ, ಇರಾನಿ ಗ್ಯಾಂಗ್ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್, ಅ.7: ನಗರದ ಚಿದ್ರಿ ಗ್ರಾಮದ ವ್ಯಾಪ್ತಿಯಲ್ಲಿ ಬೆಲೆಬಾಳುವ ಜಮೀನು ಕಬಳಿಸಲು ವ್ಯಕ್ತಿಯೊಬ್ಬ ರೌಡಿಗಳ ಗುಂಪನ್ನು ಬಳಸಿಕೊಂಡು ತಮ್ಮ ಕುಟುಂಬದ ಮೇಲೆ ನಿರಂತರ ಹಲ್ಲೆ ಹಾಗೂ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಚಿದ್ರಿ ಗ್ರಾಮದ ನಿವಾಸಿ ತುಕಾರಾಮ ಚಿಮಕೋಡೆ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ರಕ್ಷಣೆಗಾಗಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಚಿದ್ರಿ ವ್ಯಾಪ್ತಿಯ ಸರ್ವೆ ನಂ. 10/*/2ರಲ್ಲಿ ತಮ್ಮ ತಾಯಿ ರತ್ನಮ್ಮ ಅವರ ಹೆಸರಿನಲ್ಲಿ 20 ಗುಂಟೆ ಜಮೀನು ಇದೆ. ಈ ಜಮೀನಿನ ಮೇಲೆ ಕಣ್ಣಿಟ್ಟಿರುವ ರವೀಂದ್ರ ತಂದೆ ಕಲ್ಲಯ್ಯ ಸ್ವಾಮಿ ಎಂಬವರು, ಜಮೀನು ತಮ್ಮದೆಂದು ತೋರಿಸುವ ನಕಲಿ ದಾಖಲೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರಿದರು.
ಜಮೀನು ಬಿಟ್ಟುಕೊಡುವಂತೆ ಒತ್ತಡ ಹೇರಲು ಇರಾನಿ ಸಮುದಾಯಕ್ಕೆ ಸೇರಿದ ಕೆಲ ರೌಡಿಗಳನ್ನು ಕಳುಹಿಸಿ ತಮ್ಮ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ನಿರಂತರ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ತುಕಾರಾಮ ಚಿಮಕೋಡೆ ತಿಳಿಸಿದರು.
ಕಳೆದ ಆಗಸ್ಟ್ 14 ಹಾಗೂ ಸೆಪ್ಟೆಂಬರ್ 9ರಂದು ಜೆಸಿಬಿ ಮತ್ತು ಟ್ರ್ಯಾಕ್ಟರ್ಗಳೊಂದಿಗೆ ಅಕ್ರಮವಾಗಿ ಜಮೀನಿಗೆ ನುಗ್ಗಿದ ಕೆಲವರು ಕಾಂಪೌಂಡ್ ಗೇಟ್ ಒಡೆದು ದಾಂಧಲೆ ನಡೆಸಿದ್ದಾರೆ. ಅಲ್ಲದೆ, ಮಾರಕಾಸ್ತ್ರಗಳಿಂದ ತಮ್ಮ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಸೆಪ್ಟೆಂಬರ್ 19ರಂದು ರಾತ್ರಿ ಮನೆ ಬಳಿ ಬಂದು ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಗಾಯಗೊಂಡ ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಅವರು ಹೇಳಿದರು.
“ಆರೋಪಿ ರವೀಂದ್ರ ಸ್ವಾಮಿ ನಿರುದ್ಯೋಗಿ ಯುವಕರಿಗೆ ಜಮೀನು ಕಬಳಿಸುವುದು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳುವ ಕುರಿತು ತರಬೇತಿ ನೀಡುತ್ತಿದ್ದಾನೆ. ಅವರ ಕಿರುಕುಳದಿಂದ ನಮ್ಮ ಕುಟುಂಬ ದಿನನಿತ್ಯ ಭಯದಲ್ಲಿ ಬದುಕುವಂತಾಗಿದೆ. ನಮಗೆ ಏನಾದರೂ ಅನಾಹುತವಾದರೆ ರವೀಂದ್ರ ಸ್ವಾಮಿಯವರೇ ನೇರ ಹೊಣೆಗಾರರು” ಎಂದು ತುಕಾರಾಮ ಚಿಮಕೋಡೆ ಆತಂಕ ವ್ಯಕ್ತಪಡಿಸಿದರು.
ಈ ಸಂಬಂಧ ಡಿಸಿಆರ್ಬಿ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 14/2026 ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ಮಧ್ಯಪ್ರವೇಶಿಸಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವುದರ ಜೊತೆಗೆ ಜಮೀನು ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರತ್ನಮ್ಮ ಹಾಗೂ ಅವರ ಪುತ್ರ ಬಾಬುರಾವ್ ಉಪಸ್ಥಿತರಿದ್ದರು.



