ಜಿಲ್ಲಾಸುದ್ದಿ

ಕೃಷಿ ವಿಜ್ಞಾನ ಕೇಂದ್ರದ ಜಮೀನು ಹಸ್ತಾಂತರ ವಿರೋಧಿಸಿ ಪ್ರತಿಭಟನೆ

ಕಲಬುರಗಿ, ಅ.7- ದೇಶಕ್ಕೆ 11 ಶ್ರೇಷ್ಠ ತೊಗರಿ ತಳಿಗಳನ್ನು ಕೊಡುಗೆಯಾಗಿ ನೀಡಿರುವ ಹಾಗೂ ನೂರಾರು ಕೃಷಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರದ ಜಮೀನನ್ನು ಬೇರೆ ಉದ್ದೇಶಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಅಧ್ಯಕ್ಷ ರವಿ ಎನ್. ದೇಗಾಂವ್ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಆಸ್ಪತ್ರೆ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಆದರೆ ಅದಕ್ಕಾಗಿ ದಶಕಗಳಿಂದ ಕೃಷಿ ಸಂಶೋಧನೆ ಮತ್ತು ಕೃಷಿ ಶಿಕ್ಷಣಕ್ಕೆ ಬಳಕೆಯಾಗುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರದ ಜಮೀನು ಆರೋಗ್ಯ ಸೇವೆಯ ಅಭಿವೃದ್ಧಿ ಸೇರಿದಂತೆ ಬೇರೆ ಉದ್ದೇಶಗಳಿಗೆ ಬಳಸಲು ಹಸ್ತಾಂತರಿಸುವ ಪ್ರಸ್ತಾವನೆ ಕೈಬಿಡಬೇಕು. ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಳೆದ 34 ವರ್ಷಗಳಿಂದ ನೆಟೆ ರೋಗ ಸೇರಿದಂತೆ ವಿವಿಧ ಸಸ್ಯ ರೋಗಗಳ ಕುರಿತು ನಿರಂತರ ಸಂಶೋಧನೆ ನಡೆಸುತ್ತಿರುವ ಈ ಕೇಂದ್ರವು ದೇಶದ ಆತ್ಮನಿರ್ಭರ ಕೃಷಿ ಉದ್ದೇಶಗಳಿಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಇಂತಹ ಮಹತ್ವದ ಸಂಶೋಧನಾ ಕೇಂದ್ರದ ಜಮೀನನ್ನು ಬೇರೆ ಉದ್ದೇಶಕ್ಕೆ ನೀಡಿದರೆ, ಕೃಷಿ ಸಂಶೋಧನಾ ವಿಭಾಗವನ್ನು ಮತ್ತೆ ಸ್ಥಾಪಿಸಲು ಕನಿಷ್ಠ ಇನ್ನೂ 34 ವರ್ಷಗಳೇ ಬೇಕಾಗಬಹುದು ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಕೃಷಿ ಸಂಶೋಧನೆಗಾಗಿ ಮೀಸಲಿಟ್ಟ ಜಮೀನನ್ನು ಬೇರೆ ಉದ್ದೇಶಕ್ಕೆ ವರ್ಗಾಯಿಸಲು ಸರ್ಕಾರದ ನಿಯಮಾವಳಿಗಳಲ್ಲಿಯೂ ಅವಕಾಶವಿಲ್ಲ. ಪ್ರಯೋಜನಕಾರಿ ಕೃಷಿ ಯೋಜನೆಗಳಿಗೆ ಮೀಸಲಾದ ಜಮೀನನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದರು.

ಈ ಕೇಂದ್ರವು ಮಹಾವಿದ್ಯಾಲಯಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಹಾಗೂ ಸಾವಿರಾರು ರೈತರಿಗೆ ತರಬೇತಿ ನೀಡಲು ಪ್ರಮುಖ ಕೇಂದ್ರಬಿಂದುವಾಗಿದೆ. ಹೀಗಾಗಿ ಇದರ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ಆಗ್ರಹಿಸಿದರು.

ಆಸ್ಪತ್ರೆ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಆದರೆ ನಗರದ ಪರ್ಯಾಯ ಸರ್ಕಾರಿ ಜಾಗಗಳನ್ನು ಬಳಸಿಕೊಂಡು ಆಸ್ಪತ್ರೆ ನಿರ್ಮಿಸಬೇಕು. ಕೃಷಿ ಸಂಶೋಧನಾ ಕೇಂದ್ರದ ಜಮೀನನ್ನು ಹಸ್ತಾಂತರಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣ ಕೈಬಿಟ್ಟು, ರೈತರ ಮತ್ತು ಕೃಷಿ ಕ್ಷೇತ್ರದ ಹಿತವನ್ನು ಕಾಪಾಡಬೇಕು ಎಂದು ರವಿ ಎನ್. ದೇಗಾಂವ್ ಒತ್ತಾಯಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button